ಪುತ್ತೂರು: ಬಂಟರ ಸಂಘದಿಂದ ಶಾಸಕ ಅಶೋಕ್ ರೈಯವರಿಗೆ ಅಭಿನಂದನಾ ಸಮಾರಂಭ
ಪುತ್ತೂರು: ನಾನು ಶಾಸಕನಾಗಲು ಬಂಟ ಸಮುದಾಯದ ಆಶೀರ್ವಾದ ನನಗೆ ದೊಕಿದ್ದು, ಇತರ ಸಮುದಾಯದವರಿಗೆ ಸ್ಪಂದನೆ ನೀಡುವ ಜತೆಗೆ ಒಂದಲ್ಲಾ ಒಂದು ದಿನ ಬಂಟ ಸಮುದಾಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತೇನೆ. ಸರಕಾರದಿಂದ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಜೂ.18ರಂದು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾರ್ಗದರ್ಶನದಲ್ಲಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ಬಂಟರ ಭವನದಲ್ಲಿ ನಡೆದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಪತ್ನಿ ಸುಮಾ ಎಸ್. ರೈ ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರನ ಜತೆಯಾಗಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಅಭಿನಂದಿಸಲಾಯಿತು.
SSLC, PUC ಯಲ್ಲಿ ಬಂಟ ಸಮಾಜದಿಂದ ಅತೀ ಹೆಚ್ಚು ಅಂಕ ಪಡೆದವರನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಅಭಿನಂದನಾ ಪತ್ರ ವಾಚಿಸಿದರು. ರೂಪರೇಖಾ ಆಳ್ವ ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.