ಕರಾವಳಿರಾಜಕೀಯ

ಸುಳ್ಯ: ಕ್ರೀಡಾಂಗಣ ಕಾಮಗಾರಿಯ ಲೋಪಗಳನ್ನು ಸರಿಪಡಿಸದಿದ್ದರೆ ಲೋಕಾಯುಕ್ತ ತನಿಖೆಗೆ ಚಿಂತನೆ: ಕಾಂಗ್ರೆಸ್ ಎಚ್ಚರಿಕೆ

ಸುಳ್ಯ ಶಾಂತಿನಗರದಲ್ಲಿ ಕಾಮಗಾರಿಯಲ್ಲಿರುವ ತಾಲೂಕು ಕ್ರೀಡಾಂಗಣದ ಕೆಲಸ ಕಾರ್ಯಗಳಲ್ಲಿ ಆದ ಲೋಪಗಳನ್ನು ಸರಿಪಡಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಕೊಡುವ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.


ಮೇ.27 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಯಾವುದೇ ಕೆಲಸ ಕಾರ್ಯಗಳ ಯೋಜನೆಗಳನ್ನು ಅಧಿಕಾರಿಗಳು ರೂಪಿಸುವಾಗ ಸರಿಯಾದ ಚಿತ್ರಣವನ್ನು ಮೊದಲೇ ರೆಡಿ ಮಾಡಿಕೊಳ್ಳಬೇಕಾಗಿದೆ. ಆದರೆ ಸುಳ್ಯ ತಾಲೂಕು ಕ್ರೀಡಾಂಗಣದ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಯಾವುದೇ ರೀತಿಯ ಪ್ಲಾನ್ ನಿರ್ಮಿಸದೆ ಮನಸಿಗೆ ಬಂದಂತೆ ಕೆಲಸ ಮಾಡಿದ ಕಾರಣ ಕಳೆದ ಒಂದು ವರ್ಷದಿಂದ ಮಣ್ಣು ಅಗೆಯುವ ಕೆಲಸ ಮಾತ್ರ ಆಗುತ್ತಿದೆ.
ಇದೇ ರೀತಿ ಮುಂದುವರೆದಲ್ಲಿ ಇದರ ಸಂಪೂರ್ಣ ಮಾಹಿತಿಯನ್ನು ಲೋಕಾಯುಕ್ತರಿಗೆ ದೂರಿನ ಮೂಲಕ ನೀಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ತಾಲೂಕಿನಲ್ಲಿ ಸಮಸ್ಯೆಗಳು ಹಲವು ಇದೆ. ಸರಿ ಪಡಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದನೆ ಇಲ್ಲ. ಅವರು ಬಿಜೆಪಿ ಸರಕಾರದ ಗುಂಗಿನಲ್ಲಿದ್ದಾರೆ. ಜನರಿಗೆ ಸರಿಯಾಗಿ ಸೇವೆ ನಿಡುವವರು, ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡುವವರು ಮಾತ್ರ ಇಲ್ಲಿರಿ. ಹಾಗೆ ಇರಲು ಇಷ್ಟವಿಲ್ಲದಿದ್ದರೆ ನಮಗೆ ತಿಳಿಸಿ ಅವರನ್ನು ಬೇರೆಡೆಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದರು.

ಭ್ರಷ್ಟಾಚಾರ ತಡೆಯಲು ಯುವಕರ ತಂಡ ಮಾಡುತ್ತೇವೆ, ಪ್ರಕರಣವನ್ನು ಪತ್ತೆ ಮಾಡಿ ಮುಖ್ಯಮಂತ್ರಿ – ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ.ಇಲ್ಲಿ ಅಕ್ರಮ – ಸಕ್ರಮ ಕಡತ ವಿಲೇವಾರಿಗೆ ಅಧಿಕಾರಿಗಳು 1 ಲಕ್ಷರೂ ತಗೊಂಡ ನಿದರ್ಶನವಿದೆ.ಮುಂದೆ ಈ ರೀತಿ ಆಗದಂತೆ ನಾವು ತಡೆಯುತ್ತೇವೆ ಎಂದು ಅವರು ಹೇಳಿದರಲ್ಲದೆ, ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತೇವೆ ಎಂದರು.


ಕಾಂಗ್ರೆಸ್ ಪಕ್ಷ ಮಾತು ಕೊಟ್ಟಂತೆ ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಗ್ಯಾರಂಟಿ ಘೋಷಣೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಅದನ್ನು ಜಾರಿಗೊಳಿಸಲು ಹಣಕಾಸಿನ ವ್ಯವಸ್ಥೆ ನೋಡಿಕೊಂಡು ಮಾಡುತ್ತಾರೆ. 2014ರಲ್ಲಿ ಮೋದಿಯವರು ಕಪ್ಪು ಹಣ ತಂದು 15 ಲಕ್ಷ ಎಲ್ಲರಿಗೂ ಕೊಡುತ್ತೇವೆ ಎಂದಿದ್ದರು ಇದುವರೆಗೆ ಕೊಟ್ಟಿದ್ದಾರ?. ಜನ್‌ಧನ್ ಯೋಜನೆಯ ಅಕೌಂಟ್ ಏನಾಯಿತು ? ಎಂದ ವೆಂಕಪ್ಪ ಗೌಡರು ಕಾಂಗ್ರೆಸ್ ಅವರ ಹಾಗೆ ಮಾಡುವುದಿಲ್ಲ, ಕೊಟ್ಟ ಮಾತು ಉಳಿಸುತ್ತೇವೆ ಎಂದು ಹೇಳಿದರು.

ಸುಳ್ಯದ ವಳಲಂಬೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಕಿದ್ದ ಬ್ಯಾನರ್‌ಗೆ ವಿಘ್ನ ಸಂತೋಷಿಗಳು ಬೆಂಕಿ ಹೆಚ್ಚಿದ್ದಾರೆ. ಇದು ಹೀಗೆ ಮುಂದುವರಿದರೆ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಕುರಿತು ಸುಳ್ಯದ ಯುವಕ ಅವಹೇಳನಕಾರಿಯಾಗಿ ಕಮೆಂಟ್ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್,ಕೆಪಿಸಿಸಿ ಸಂಯೋಜಕ ಎಸ್.ಸಂಶುದ್ದೀನ್,ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರುಗಳಾದ ಬಾಲಕರಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!