ರಾಜ್ಯ

ಬಂಧನ ಆಗಿದೆ ಎನ್ನುವ ವದಂತಿ ಮಧ್ಯೆಯೇ ಆರೋಪಿ ಪುನೀತ್ ಕೆರೆಹಳ್ಳಿಯಿಂದ ವಿಡಿಯೋ ರಿಲೀಸ್..!



ಇದ್ರೀಷ್‌ ಪಾಷ ಅನುಮಾನಾಸ್ಪದ ಸಾವಿಗೀಡಾಗಿರುವ ವಿಚಾರದಲ್ಲಿ ನನ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ’ ಎಂದು ಪ್ರಕರಣದ ಪ್ರಮುಖ ಆರೋಪಿ ಪುನೀತ್‌ ಕೆರೆಹಳ್ಳಿ ಹೇಳಿಕೆ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಅನೇಕ ದೇವಸ್ಥಾನಗಳಿಗೆ ನಾನು ಭೇಟಿ ಕೊಡುತ್ತಿದ್ದು, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್‌ ಆಫ್‌ ಆಗಿತ್ತು. ಹೀಗಾಗಿ, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಾಹಿತಿ ಬಂದರೆ ನಾನೇ ಖುದ್ದು ಪೊಲೀಸರ ಮುಂದೆ ಬರುತ್ತೇನೆ’ ವಿಚಾರಣೆ ಎದುರಿಸುತ್ತೇನೆ ಎಂದು ಆತ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

‘ಯಾರಿಗೂ ನಾನು ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ದುಡ್ಡು ಮಾಡಲು ಈ ಹೋರಾಟಕ್ಕೆ ಬಂದಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಯಾರೇ ನನ್ನ ವಿರುದ್ಧ ನಿಂತರೂ ಹೋರಾಟ ಬಿಡುವುದಿಲ್ಲ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

‘ಶುಕ್ರವಾರ ಮಧ್ಯರಾತ್ರಿ 11.59 ರಿಂದ ನಾನು ಘಟನೆಯನ್ನು ಫೇಸ್‌ ಬುಕ್‌ ಲೈವ್‌ ಮಾಡಿದ್ದೇನೆ. ಶನಿವಾರ ಬೆಳಿಗ್ಗೆ 5ಕ್ಕೆ ಮಠಕ್ಕೆ ಹಸುಗಳನ್ನು ಬಿಡುವವರೆಗೂ ನಾನು ಪೊಲೀಸರ ಜೊತೆಯಲ್ಲೇ ಇದ್ದೆ. ನಾವು ಯಾರನ್ನೂ ಹತ್ಯೆ ಮಾಡಿಲ್ಲ. ಮರಣೋತ್ತರ ಪರೀಕ್ಷೆ ವರದಿಯೇ ಇದಕ್ಕೆ ಉತ್ತರ ನೀಡಲಿದೆ’ ಎಂದು ಆತ ವಿಡಿಯೋ ದಲ್ಲಿ ಹೇಳಿದ್ದಾನೆ.

ಪುನೀತ್ ಕೆರೆಹಳ್ಳಿ ಬಂಧನ ಆಗಿದೆ ಎನ್ನುವ ಸುದ್ದಿ ಹಬ್ಬಿರುವ ಮಧ್ಯೆಯೇ ಅವರ ವಿಡಿಯೋ ಹರಿದಾಡಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!