ಮಾಜಿ ಪೊಲೀಸ್ ಆಯುಕ್ತ, ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್ ಬಿಜೆಪಿಗೆ
ಬೆಂಗಳೂರು: ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ)ದ ಮುಖಂಡ ಭಾಸ್ಕರ್ ರಾವ್ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಅವರನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಜಕೀಯ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕಾರಗೊಂಡ ಬಳಿಕ ಅವರು ಆಮ್ ಆದ್ಮಿ ಪಕ್ಷ ಸೇರಿದ್ದರು.
ಬಸವನಗುಡಿಯಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಪಕ್ಷದಲ್ಲಿ ಸಕ್ರಿಯರಾಗಿರದೇ ಬಿಜೆಪಿ ಸೇರುವ ಪ್ರಯತ್ನದಲ್ಲಿದ್ದರು ಎಂದು ತಿಳಿದುಬಂದಿದೆ.
ತಾನು ಬಿಜೆಪಿ ಸೇರುತ್ತಿರುವುದು ನಿಜ. ನಾಳೆಯೇ ಸೇರ್ಪಡೆಗೊಳ್ಳಲಿದ್ದೇನೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ದನಿ ಎತ್ತಿದ್ದ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷದ ರಾಜ್ಯದ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದರು. ಇದೀಗ ಅವರು ದಿಢೀರ್ ಆಗಿ ಬಿಜೆಪಿ ಸೇರುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.