ಕೊನೆಗೂ ನರಭಕ್ಷಕ ಚಿರತೆ ಬೋನಿಗೆ
ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ನೂರಾರು ಮಂದಿ ಕುತೂಹಲದಿಂದ ಜಮಾಯಿಸಿದ್ದರು. ಚಿರತೆಯನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದಾಗ ತಡೆದ ಗ್ರಾಮಸ್ಥರು ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಪಟ್ಟು ಹಿಡಿದರು.
ಚಿರತೆ ಇದ್ದ ವಾಹನವನ್ನು ಸುತ್ತುವರಿದು ಪ್ರತಿಭಟಿಸಿದರಲ್ಲದೇ ಕೆಲವರು ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು–ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಅರಣ್ಯ ಇಲಾಖಾಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಕೊಂಡೊಯ್ದರು.