ಜೀವಕ್ಕೆ ಕುತ್ತು ತಂದ ಚಿಕನ್ ಖಾದ್ಯ: ಅಧಿಕಾರಿಗಳಿಂದ ರಾಜ್ಯಾದ್ಯಂತ ರೆಸ್ಟೋರೆಂಟ್ಗಳ ಮೇಲೆ ದಾಳಿ
ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯಕ್ಕೀಡಾಗಿ ಕೇರಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 33 ವರ್ಷದ ನರ್ಸ್ ರೆಶ್ಮಿ ರಾಜ್ ಎಂಬವರು ಮೃತಪಟ್ಟ ಘಟನೆಯ ಬೆನ್ನಲ್ಲೇ ಕೇರಳದ ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯಾದ್ಯಂತ ರೆಸ್ಟೋರೆಂಟ್ಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ ಶುಚಿತ್ವ ಕಾಪಾಡದೆ ಆಹಾರ ತಯಾರಿಸುತ್ತಿದ್ದ 43 ಹೋಟೆಲ್ಗಳನ್ನು ಬಂದ್ ಮಾಡಲಾಗಿದ್ದು 138 ಹೋಟೆಲ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದರೆ 44 ಆಹಾರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೊಟ್ಟಾಯಂ ಮೆಡಿಕಲ್ ಕಾಲೇಜಿನ ನ್ಯುರೋ ಐಸಿಯುವಿನಲ್ಲಿ ನರ್ಸ್ ಆಗಿದ್ದ ರೆಶ್ಮಿ ರಾಜ್ ಅವರು ನರ್ಸಿಂಗ್ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು.
ತಿರುವನಂತಪುರಂನ ವಿನೋದ್ ಕುಮಾರ್ ಎಂಬವರ ಪತ್ನಿಯಾಗಿರುವ ರೆಶ್ಮಿ ಡಿಸೆಂಬರ್ 29 ರಂದು ಹೋಟೆಲ್ ಪಾರ್ಕ್ ಮಲಪ್ಪುರಂ ಇಲ್ಲಿಂದ ‘ಅಲ್ಫಂ ಅರಬಿಕ್ ಗ್ರಿಲ್ಡ್ ಚಿಕನ್ ಮತ್ತು ಕುಝಿಮಂತಿ (ಅಕ್ಕಿಯ ಖಾದ್ಯ) ಆರ್ಡರ್ ಮಾಡಿ ತಿಂದಿದ್ದರು.
ರಾತ್ರಿ ವೇಳೆ ಆಕೆ ಅನಾರೋಗ್ಯಕ್ಕೊಳಗಾಗಿದ್ದರು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದರು. ವಾಂತಿ ಬೇಧಿಯಿಂದ ಬಳಲುತ್ತಿದ್ದ ಅವರನ್ನು ರವಿವಾರ ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಆಕೆಯ ಆರೋಗ್ಯ ಹದಗೆಟ್ಟಿತ್ತು. ಕಿಡ್ನಿಯಲ್ಲಿ ಸೋಂಕು ಕಂಡು ಬಂದಿದ್ದರಿಂದ ಡಯಾಲಿಸಿಸ್ ಚಿಕಿತ್ಸೆಗೂ ಒಳಗಾದರೂ ಪ್ರಯೋಜನವಾಗದೆ ರಾತ್ರಿ ವೇಳೆ ಮೃತಪಟ್ಟಿದ್ದರು.