ಕರಾವಳಿ

ನೀರು ಕೊಡಿ.. ನೀರು ಕೊಡಿ.. ಸುಳ್ಯ ನಗರ ಪಂಚಾಯತ್ ಸದಸ್ಯನಿಂದ ಬಿಂದಿಗೆ ಹಿಡಿದು ಏಕಾಂಗಿ ಪ್ರತಿಭಟನೆ- ಮುಖ್ಯಾಧಿಕಾರಿ ಭೇಟಿ



ಸುಳ್ಯ ನಗರದ ಕುಡಿಯುವ ನೀರಿನ ಸಮಸ್ಯೆ ಇದೀಗ ವಿಪಕ್ಷ ಸದಸ್ಯರೋರ್ವರು ಖಾಲಿ ಬಿಂದಿಗೆಗಳನ್ನು ಹಿಡಿದು ನಗರ ಪಂಚಾಯತ್ ಮುಂಭಾಗದಲ್ಲಿ ಧರಣಿ ಕುಳಿತುಕೊಳ್ಳುವಲ್ಲಿಗೆ ಬಂದು ನಿಂತಿದೆ.


ಸುಳ್ಯ ನಗರದ ಬೋರುಗುಡ್ಡೆ ಸಹಿತ ನಗರದ ಹಲವು ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.ಪಂ. ವಿಪಕ್ಷ ಸದಸ್ಯ ಕೆ.ಎಸ್. ಉಮ್ಮರ್ ಇಂದು ಪಂಚಾಯತ್ ಎದುರು ಬಿಂದಿಗೆ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿದರು .

ಪ್ರತಿಭಟನೆಯ ಕುರಿತು ಮಾತನಾಡಿದ ಅವರು “ಕಳೆದ 6 ತಿಂಗಳಿನಿಂದಲೇ ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸುವಂತೆ ಆಡಳಿತವನ್ನು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸುತ್ತಾ ಬಂದರೂ ಸಮಸ್ಯೆ ಪರಿಹಾರವಾಗಿಲ್ಲ. ಮೂಲಭೂತವಾಗಿ ವಾರ್ಡ್ ನ ಜನರಿಗೆ ನೀರಿನ ಅವಶ್ಯಕತೆ ಇದೆ. ಅದನ್ನು ನ.ಪಂ. ಒದಗಿಸಬೇಕು. ಸಂಬಂಧಪಟ್ಟವರ ಬಳಿ ಕೇಳಿದರೆ ನೀರು ಶುದ್ದೀಕರಣ ಘಟಕದಲ್ಲಿರುವ ಮೋಟಾರ್ ಗಳು ಕೆಟ್ಟು ಹೋಗಿದೆ ಎಂದು ಹೇಳುತ್ತಿದ್ದಾರೆ. ಅದನ್ನು ಸರಿಪಡಿಸಲು ಮಂಗಳೂರಿನಿಂದ ತಾಂತ್ರಿಕ ವಿಭಾಗದವರು ಬರಬೇಕಾಗುತ್ತದೆ. ಕೆಲವೊಮ್ಮೆ ಬಂದು ಬೆಳಿಗ್ಗೆ ಸರಿ ಮಾಡಿ ಹೋದರೆ ಸಂಜೆ ಮತ್ತೆ ಮೋಟರು ಕೆಟ್ಟುಹೋಗುತ್ತದೆ.
ಶಾಶ್ವತವಾದ ಯಾವುದೇ ಒಂದು ಕಾರ್ಯ ನಡೆಯುತ್ತಿಲ್ಲ. ಈ ಸಮಸ್ಯೆ ಇತ್ಯರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ವಾರ್ಡ್ ಜನರೊಂದಿಗೆ ಬಂದು ನ.ಪಂ. ಎದುರು ನೀರಿನ ಸಮಸ್ಯೆ ಇತ್ಯರ್ಥವಾಗುವ ತನಕ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆಯನ್ನು ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರವರು “ನೀರಿನ ಸಮಸ್ಯೆ ಇರುವುದು ಹೌದು. ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರದಲ್ಲಿ ಪಂಪ್ ಕೈ ಕೊಡುತ್ತಿದೆ. ಮಂಗಳೂರಿನಿಂದ ತಂತ್ರಜ್ಞರು ಬಂದು ರಿಪೇರಿ ಕಾರ್ಯ ನಡೆಸುತ್ತಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ನಳ್ಳಿಯಲ್ಲಿ ನೀರು ಬರುತ್ತಿಲ್ಲ.‌ ಆದರೆ ನೀರಿನ ಸಮಸ್ಯೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ನೀರು ತುರ್ತಾಗಿ ಬೇಕಾದವರು ನ.ಪಂ. ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಮುಖ್ಯಾಧಿಕಾರಿ ಭೇಟಿ: ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ತಾಂತ್ರಿಕವಾದ ಸಮಸ್ಯೆಗಳು ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಆದ್ದರಿಂದ ಕೂಡಲೇ ಅದನ್ನು ಸರಿಪಡಿಸುವುದಾಗಿ ಭರವಸೆಯನ್ನು ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ವಿನಂತಿಸಿಕೊಂಡರು.

ಪ್ರತಿಭಟನೆ ವಾಪಸ್: ಈ ಸಂದರ್ಭದಲ್ಲಿ ಇದಕ್ಕೆ ಒಪ್ಪಿದ ಉಮ್ಮರ್ ರವರು ಸದ್ಯಕ್ಕೆ ಧರಣಿಯನ್ನು ನಿಲ್ಲಿಸುವುದಾಗಿ ಎರಡು ದಿನಗಳಲ್ಲಿ  ಕುಡಿಯುವ ನೀರಿನ ಸಮಸ್ಯೆಗಳನ್ನು ಸರಿಪಡಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಕೊನೆಗೊಳಿಸಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!