ಗಿಫ್ಟ್ ನೀಡುವ ನೆಪದಲ್ಲಿ 18 ಲಕ್ಷ ರೂ. ವಂಚನೆ – ವಿದೇಶಿ ಜೋಡಿಯಿಂದ ಮಹಿಳೆಗೆ ಪಂಗನಾಮ
ಫೇಸ್ಬುಕ್ನಲ್ಲಿ ಪರಿಚಯವಾದ ವಿದೇಶಿ ಜೋಡಿಯೊಂದು ಗಿಫ್ಟ್ ನೀಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 18.15 ಲಕ್ಷ ರೂಪಾಯಿ ವಂಚಿಸಿರುವುದಾಗಿ ಥಾಣೆ ನಗರ ಪೊಲೀಸರು ತಿಳಿಸಿದ್ದಾರೆ.
ಜನವರಿ ತಿಂಗಳಿನಲ್ಲಿ 48 ವರ್ಷದ ಮಹಿಳೆಗೆ ಫೇಸ್ಬುಕ್ನಲ್ಲಿ ವ್ಯಕ್ತಿ ಹಾಗೂ ಮಹಿಳೆ ರಿಕ್ವೆಸ್ಟ್ ಕಳುಹಿಸಿದ್ದರು. ಜೊತೆಗೆ ಇಬ್ಬರು ಲಂಡನ್ ಮೂಲದ ನರಶಸ್ತ್ರಚಿಕಿತ್ಸಕರು ಎಂದು ಹೇಳಿಕೊಂಡಿದ್ದರು. ನಂತರ ಆಗಸ್ಟ್ನಲ್ಲಿ ಇಬ್ಬರೂ ಸೇರಿ ಮಹಿಳೆಗೆ ದುಬಾರಿ ಉಡುಗೊರೆಯನ್ನು ಕಳುಹಿಸಿರುವುದಾಗಿ ಮಹಿಳೆಗೆ ಸಂದೇಶ ಕಳುಹಿಸಿದ್ದಾರೆ. ಆದರೆ ಅದನ್ನು ಕಸ್ಟಮ್ಸ್ನಿಂದ ತೆರವುಗೊಳಿಸಲು ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಮಾತನ್ನು ನಂಬಿದ ಮಹಿಳೆ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 18,51,221 ರೂಪಾಯಿ ಜಮಾ ಮಾಡಿದ್ದಾಳೆ. ನಂತರ ಯಾವುದೇ ಉಡುಗೊರೆ ಬರದಿದ್ದಾಗ ಆಕೆಗೆ ತಾನು ಮೋಸ ಹೋಗಿರುವ ವಿಚಾರ ಅರಿವಾಗಿದೆ.
ಬಳಿಕ ಈ ಸಂಬಂಧ ಥಾಣೆ ನಗರದ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.