ಕಾಣಿಯೂರು: ಮಹಿಳೆಯ ಮಾನಭಂಗ ಯತ್ನ ಪ್ರಕರಣ । ರಾಜಕೀಯವಾಗಿ ತಿರುವು ಪಡೆಯುತ್ತಿದೆ, ಧರ್ಮವನ್ನೂ ಎಳೆದು ತರುವ ಕೆಲಸ: ಶೋಭಾ ಕರಂದ್ಲಾಜೆ
ಕಾಣಿಯೂರು: ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಮಹಿಳೆಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚು ಇದ್ದು, ಮಹಿಳೆಯರಲ್ಲಿ ಭಯ ಹುಟ್ಟಿಸುವಂತಿದೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದು, ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮನೆಯೊಳಕ್ಕೆ ನುಗ್ಗಿ ಮಹಿಳೆಯ ಕೈ ಹಿಡಿದು ಎಳೆದು ಮಾನಭಂಗ ಯತ್ನ ನಡೆಸಿರುವುದು ಭಯ ಹುಟ್ಟಿಸುವಂತಿದೆ ಎಂದರು.
ಈ ಘಟನೆ ತಿಳಿದವರು ಆಕ್ರೋಶಗೊಂಡು ಆರೋಪಿಗಳಿಗೆ ಹಲ್ಲೆ ನಡೆಸಿದ ಘಟನೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು,ಧರ್ಮವನ್ನೂ ಎಳೆದು ತರುವ ಕೆಲಸವಾಗುತ್ತಿದೆ. ಮಹಿಳೆಯ ಮೇಲಿನ ಮಾನಭಂಗ ಯತ್ನ ಪ್ರಮಾಣವನ್ನೂ ಧರ್ಮದ ಕನ್ನಡಕದ ಮೂಲಕ ನೋಡುತ್ತಿರುವುದು ಸರಿಯಲ್ಲ. ಮಹಿಳೆಯ ಮೇಲಿನ ಮಾನಭಂಗ ಯತ್ನ ಪ್ರಕರಣವನ್ನೂ ಎಲ್ಲಾ ಧರ್ಮದವರೂ ಖಂಡಿಸಬೇಕು.ಕಠಿಣ ಶಿಕ್ಷೆಗೆ ಒತ್ತಾಯಿಸಬೇಕಿದೆ. ಆರೋಪಿಗಳ ಪರ ಮಾತನಾಡುವವರೇ ಆರೋಪಿಗಳನ್ನು ಕಳುಹಿಸಿದರೇ ಎಂಬ ಸಂಶಯ ಮೂಡುತ್ತಿದೆ. ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಆರೋಪಿಗಳಿಗೆ ಅತೀ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.