ಬಿಸಿಲೆ ಘಾಟ್ನಲ್ಲಿ ಯುವತಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ
ಉಪ್ಪಿನಂಗಡಿ: ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಘಟನೆ ಬಿಸಿಲೆ ಘಾಟ್ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ಎಂಬಾತನಿಗೆ ದೂರುದಾರ ಯುವತಿಯ ಪರಿಚಯವಿದ್ದು, ಕಳೆದ ಮೂರು ವರ್ಷಗಳಿಂದ ಇಬ್ಬರೂ ಸ್ನೇಹಿತರಾಗಿದ್ದರು ಎನ್ನಲಾಗಿದೆ. ನ.4ರಂದು ಸಂಜೆ ಉಪ್ಪಿನಂಗಡಿಯಿಂದ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟ್ ಕಡೆಗೆ ತೆರಳಿದ್ದ ಆರೋಪಿ, ರಾತ್ರಿ ವೇಳೆ ದಾರಿ ಮಧ್ಯೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯ ಪರಿಣಾಮ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ನ.5ರಂದು ಬೆಳಿಗ್ಗೆ ಪ್ರಜ್ಞೆ ಮರಳಿದ ಬಳಿಕ ಸುಬ್ರಹ್ಮಣ್ಯಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(1), 109(1)ರಡಿ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯ ನಡೆದ ಸ್ಥಳ ಹಾಸನ ಜಿಲ್ಲೆಯ ಯೆಸಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯೆಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.



