ಅಂತಾರಾಷ್ಟ್ರೀಯಕ್ರೀಡೆ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಕ್ರಿಸ್ಟಿಯಾನೊ ರೊನಾಲ್ಡೊ  ನಿವೃತ್ತಿ ಘೋಷಣೆ

ಫುಟ್‌ಬಾಲ್ ಜಗತ್ತಿನ ಖ್ಯಾತ ಆಟಗಾರ, ಪೋರ್ಚುಗಲ್ ತಂಡದ ಮಾಜಿ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ 23 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ.


41 ವರ್ಷದ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ತಾವು ಧರಿಸುತ್ತಿದ್ದ ಐತಿಹಾಸಿಕ 7ನೇ ಸಂಖ್ಯೆಯ ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕ ಸಂದೇಶ ನೀಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ರೊನಾಲ್ಡೋ, ‘ಪೋರ್ಚುಗಲ್ ಜನರೇ, ನಮ್ಮ ರಾಷ್ಟ್ರೀಯ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಹಿಂತಿರುಗಿಸುವ ಸಮಯ ಬಂದಿದೆ. ಕಳೆದ 23 ವರ್ಷಗಳಿಂದ ಈ ಜೆರ್ಸಿ ಧರಿಸುವ, ಅದನ್ನು ರಕ್ಷಿಸುವ ಮತ್ತು ವಿಶ್ವದ ವಿವಿಧ ಕ್ರೀಡಾಂಗಣಗಳಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸುವ ಗೌರವ ನನಗೆ ಸಿಕ್ಕಿತ್ತು. ಈಗ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.

2003ರ ಆಗಸ್ಟ್‌ನಲ್ಲಿ ಪೋರ್ಚುಗಲ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ರೊನಾಲ್ಡೊ, ಕಳೆದ 23 ವರ್ಷಗಳಲ್ಲಿ ಹಲವು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದಾರೆ. ರೊನಾಲ್ಡೋ ಪೋರ್ಚುಗಲ್ ಪರ 234 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಂತೆಯೇ 146 ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಹಾಗೂ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ರೊನಾಲ್ಡೊ ಹೆಸರಿನಲ್ಲಿದೆ.

Leave a Reply

Your email address will not be published. Required fields are marked *

error: Content is protected !!