ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಬಟ್ಟೆ ಕಳವು: ಆರೋಪಿ ಬಂಧನ
ಬೆಳ್ಳಾರೆ: ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ನೀಡಿದ ದೂರಿನಂತೆ, ಸೆಪ್ಟೆಂಬರ್ 2ರಂದು ಬೆಳಿಗ್ಗೆ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಕೆಲವು ಬಟ್ಟೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ವಿದ್ಯಾರ್ಥಿನಿಯರು ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು.

ನಂತರ ವಿದ್ಯಾರ್ಥಿನಿಲಯದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 2ರಂದು ಬೆಳಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶಿಸಿ, ಒಣಗಿಸಲು ಹಾಕಿದ್ದ ಬಟ್ಟೆಗಳಲ್ಲಿ ಕೆಲವು ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ನೀಡಲಾದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 54/2026, ಕಲಂ 331(4), 305 BNS-2023ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪುತ್ತೂರು ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂಬಾತನನ್ನು ಸೆಪ್ಟೆಂಬರ್ 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಸೆ. 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.


