ಕರಾವಳಿ

ಪ್ರತೀ ಸೋಮವಾರ ಶಾಸಕ ಅಶೋಕ್ ರೈ ಕಚೇರಿಯಲ್ಲಿ ಗಂಜಿ ವ್ಯವಸ್ಥೆ


ಪುತ್ತೂರು: ಇನ್ನು ಮುಂದೆ ಪ್ರತೀ ಸೋಮವಾರ ಶಾಸಕ ಅಶೋಕ್ ರೈ ಕಚೇರಿಯಲ್ಲಿ ಮಧ್ಯಾಹ್ನ ಗಂಜಿ, ಚಟ್ನಿ ದೊರೆಯಲಿದೆ. ಶಾಸಕರನ್ನು ಭೇಟಿಯಾಗಲು ಬರುವ ಪ್ರತೀಯೊಬ್ಬ ಸಾರ್ವಜನಿಕರಿಗೆ ಮಧ್ಯಾಹ್ನ ಊಟಕ್ಕೆ ಎಲ್ಲೂ ಹೋಗಬೇಕಾಗಿಲ್ಲ, ಕಚೇರಿಯಲ್ಲೇ ಗಂಜಿ ದೊರೆಯಲಿದೆ.

ವಾರದ ಪ್ರತೀ ಸೋಮವಾರ ಶಾಸಕ ಅಶೋಕ್ ರೈ ಅವರು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುತ್ತಾರೆ. ಶಾಸಕರನ್ನು ಭೇಟಿಯಾಗಲು ಕನಿಷ್ಟ 500 ರಿಂದ 700 ಮಂದಿ ಬರುತ್ತಾರೆ. ಕಚೇರಿಗೆ ಬಂದ ಪ್ರತೀಯೊಬ್ಬರನ್ನೂ ಮಾತನಾಡಿಸುವ ಶಾಸಕರು ಅವರ ಸಮಸ್ಯೆಯನ್ನು ಆಲಿಸುತ್ತಾರೆ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರವನ್ನು ಒದಗಿಸುತ್ತಾರೆ. ಶಾಸಕರ ಭೇಟಿಗೆ ಬಂದವರು ಸರದಿ ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಕಚೇರಿಗೆ ಬಂದವರು ಮಧ್ಯಾಹ್ನದ ಊಟಕ್ಕಾಗಿ ಬೇರೆ ಕಡೆ ಹೋಗಬೇಕಾಗಿರುವುದರಿಂದ ಕೆಲವರು ಊಟಕ್ಕೂ ತೆರಳದೆ ಶಾಸಕರ ಭೇಟಿಗಾಗಿ ಕಾಯುತ್ತಿದ್ದರು. ಇದನ್ನು ಮನಗಂಡ ಶಾಸಕರು ತಮ್ಮ ಕಚೇರಿಯಲ್ಲಿ ತಾನು ಇದ್ದ ದಿನ ಗಂಜಿ ನೀಡಲು ನಿರ್ಧಾರ ಮಾಡಿದ್ದಾರೆ. ಪ್ರಾರಂಭದ ದಿನ ಸುಮಾರು 350 ಮಂದಿ ಗಂಜಿ ಊಟ ಸವಿದಿದ್ದಾರೆ.


ನನ್ನನ್ನು ಭೇಟಿಯಾಗಲು ಬರುವ ಮಂದಿಗೆ ಪ್ರಾರಂಭದಿಂದಲೇ ಚಿಕ್ಕಿಯನ್ನು ನೀಡುತ್ತಿದ್ದೇನೆ, ಆದರೆ ನನ್ನನ್ನು ಭೇಟಿಯಾಗಲು ಕಚೇರಿಗೆ ಬರುವ ಕೆಲವರು ಊಟವನ್ನು ಮಾಡದೆ ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಈ ಕಾರಣಕ್ಕೆ ಯಾರೂ ನನ್ನ ಕಚೇರಿಗೆ ಬಂದು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಗಂಜಿ ನೀಡುವ ತೀರ್ಮಾನಕ್ಕೆ ಬಂದಿದ್ದೇನೆ. ಆರೋಗ್ಯ ಸಮಸ್ಯೆ ಇದ್ದವರಿಗೆ, ವೃದ್ದರು, ಮಕ್ಕಳು ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದಲ್ಲಿ ಆರೋಗ್ಯದಲ್ಲಿ ಏರುಪೇರಾಗಬಹುದು. ನಾನು ಕಚೇರಿಯಲ್ಲಿ ಇದ್ದ ಪ್ರತೀ ಸೋಮವಾರ ಗಂಜಿ ದೊರೆಯಲಿದೆ. ಕಚೇರಿ ಆವರಣದಲ್ಲೇ ಗಂಜಿ ನೀಡುವ ಉದ್ದೇಶದಿಂದ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!