ಕರಾವಳಿಕ್ರೈಂರಾಜ್ಯ

ಅಂತರ್ ರಾಜ್ಯ ಕಳ್ಳತನ ಪ್ರಕರಣದ ಆರೋಪಿಗಳ ಬಂಧನ

ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ದಿನಾಂಕ 19-06-2026ರಿಂದ 20-06-2026ರ ಅವಧಿಯಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 94/2026, ಕಲಂ 303(2) BNS ರಂತೆ ಪ್ರಕರಣ ದಾಖಲಾಗಿತ್ತು.


ಪ್ರಕರಣದ ಪತ್ತೆಗಾಗಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ಗುಣಪಾಲ ಜೆ. ಮತ್ತು ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ತನಿಖಾ ತಂಡವು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ, ಅಂತರ್ ರಾಜ್ಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೇರಳ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡು ಕರೂರು ನಿವಾಸಿ ಶಕ್ತಿವೇಲು ಜಿ. (24) ಎಂಬವರನ್ನು ದಸ್ತಗಿರಿ ಮಾಡಿದೆ.

ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ಅಂದಾಜು ₹2.50 ಲಕ್ಷ ಮೌಲ್ಯದ ಓಮ್ನಿ ಕಾರು ಹಾಗೂ ಕಳ್ಳತನಕ್ಕೆ ಬಳಸಲಾಗಿದ್ದ ಅಂದಾಜು ₹1 ಲಕ್ಷ ಮೌಲ್ಯದ ಕೆಟಿಎಂ ಬೈಕ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ವಿಚಾರಣೆಯ ವೇಳೆ ಆರೋಪಿಗಳು ಓಮ್ನಿ ಕಾರನ್ನು ಕದ್ದು ಕೇರಳ ರಾಜ್ಯಕ್ಕೆ ಕೊಂಡೊಯ್ದು, ಅಲ್ಲಿಂದ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡಿರುವುದು ಹಾಗೂ ತಮಿಳುನಾಡಿನಲ್ಲಿ ಸದರಿ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.


ಆರೋಪಿಗಳ ವಿರುದ್ಧ ಕೇರಳದ ಬದಿಯಡ್ಕ ಪೊಲೀಸ್ ಠಾಣೆ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿಯೂ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!