ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪಥಸಂಚಲನ
ಪುತ್ತೂರು: ನಗರ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂ ಭದ್ರತಾ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ.24ರಂದು ಪೊಲೀಸ್ ಪಥಸಂಚಲನ ನಡೆಸಲಾಯಿತು.

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸಹಜವಾಗಿ ಬಹುತೇಕ ಅಂಗಡಿಗಳು ಮುಚ್ಚಿರುತ್ತವೆ. ಇದರ ಹೊರತಾಗಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವುದಕ್ಕೆ ಅವಕಾಶ ನೀಡದಂತೆ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇನ್ನು ಪುತ್ತೂರಿನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿರುವುದು ಸತ್ಯಕ್ಕೆ ದೂರವಾಗಿದೆ.
ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಜಾತಿ, ಧರ್ಮ ಅಥವಾ ರಾಜಕೀಯ ಪ್ರಭಾವವನ್ನು ಪರಿಗಣಿಸದೆ ಪೊಲೀಸರು ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಯಾವುದೇ ಅನುಮಾನ ಅಥವಾ ಚರ್ಚೆಯ ಅಗತ್ಯವಿದ್ದಲ್ಲಿ, ಮುಕ್ತವಾಗಿ ಬಂದು ಚರ್ಚಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಪೊಲೀಸರ ಪ್ರಮುಖ ಆದ್ಯತೆಯಾಗಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಲಾಗಿದೆ.



