ಕರಾವಳಿಕ್ರೈಂ

ಪುತ್ತೂರು ದರ್ಬೆ ಗಲಾಟೆ ಪ್ರಕರಣ:  ಮೂರು ಪ್ರತ್ಯೇಕ ಪ್ರಕರಣ ದಾಖಲು; ಓರ್ವ ಆರೋಪಿ ಬಂಧನ



ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಬೆ ಜಂಕ್ಷನ್ ಬಳಿ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ದಾಖಲೆ ಲ್ಯಾಮಿನೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.



ಪ್ರಕರಣ–1:
ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ಅವರು ನೀಡಿದ ದೂರಿನಂತೆ, ದಿನಾಂಕ 21.08.2026ರಂದು ತಮ್ಮ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ವೇಳೆ ದರ್ಬೆಯ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ಕೆಲವು ದಾಖಲೆಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ಬಳಿಕ ಒಂದು ದಾಖಲಾತಿ ಹುಡಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಿಕೊಡುವಂತೆ ಅಥವಾ ಹೊಸ ದಾಖಲಾತಿಗಾಗಿ ₹300 ನೀಡುವಂತೆ ಕೇಳಿದಾಗ, ಅಂಗಡಿಯಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 97/2026, ಕಲಂ 352, 115(2), 109 ಹಾಗೂ 3(5) BNS 2023ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಆರೋಪಿ ಸುದರ್ಶನ ಪೈ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



ಪ್ರಕರಣ–2:
ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದ ಮಾಲೀಕರಾದ ಪುತ್ತೂರು ಕಸಬಾ ನಿವಾಸಿ ಅಂಜನಾ ಎಸ್. ಪೈ ಅವರು ನೀಡಿದ ದೂರಿನಂತೆ, ಲ್ಯಾಮಿನೇಷನ್‌ಗಾಗಿ ನೀಡಲಾಗಿದ್ದ ದಾಖಲೆಯೊಂದು ತಾಂತ್ರಿಕ ದೋಷದಿಂದ ಹಾನಿಗೊಳಗಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಗಲಾಟೆ ನಡೆಸುತ್ತಿರುವುದಾಗಿ ಸಿಬ್ಬಂದಿಯಿಂದ ಮಾಹಿತಿ ಪಡೆದು ಅವರು ಅಂಗಡಿಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷರು ದಾಖಲೆಗಳನ್ನು ನೀಡಬೇಕು ಅಥವಾ ₹10,000 ನೀಡಬೇಕು ಎಂದು ಒತ್ತಾಯಿಸಿ, ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಹಾಗೂ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಸಂಬಂಧ ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಅ.ಕ್ರ. 98/2026, ಕಲಂ 115(2), 352, 351(2), 79 ಹಾಗೂ 3(5) BNS 2023ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.



ಪ್ರಕರಣ–3:
ದರ್ಬೆ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದ ಎದುರು ಸಾರ್ವಜನಿಕರು ಗಲಾಟೆ ನಡೆಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಅವರಿಗೆ ಮಾಹಿತಿ ಲಭಿಸಿತ್ತು.
ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಜನರನ್ನು ಚದುರಿಸುವ ಸಂದರ್ಭದಲ್ಲಿ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಲಾಗಿದೆ. ಗಲಾಟೆಗೆ ಸಂಬಂಧಿಸಿದ ಕೆಲವರನ್ನು ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 99/2026, ಕಲಂ 132, 121(1) ಹಾಗೂ 3(5) BNS 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!