ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಆರೋಪಿ ಬಂಧನ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ನಿತಿನ್ ಕೃಷ್ಣನ್ (27) ಬಂಧಿತ ಆರೋಪಿ. ಆ.17ರಂದು ಗಾಂಜಾ ಸೇವನೆ ಪ್ರಕರಣದಲ್ಲಿ ಆಶ್ವಿನ್ ಕ್ಸೇವಿಯರ್ (24) ಎಂಬಾತನನ್ನು ವಿಚಾರಣೆ ನಡೆಸಿದಾಗ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಿತಿನ್ ಕೃಷ್ಣನ್‌ನ ಬಗ್ಗೆ ಮಾಹಿತಿ ನೀಡಿದ್ದಾನೆ.
ಈ ಮಾಹಿತಿ ಆಧರಿಸಿ ಆ.18ರಂದು ಕದ್ರಿ ಗ್ರಾಮದ ಪದವು ಮೈದಾನದ ಬಳಿ ಇರುವ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ನಿತಿನ್ ಕೃಷ್ಣನ್‌ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತನಿಂದ 60,000 ರೂ ಮೌಲ್ಯದ 1 ಕೆ.ಜಿ. 206 ಗ್ರಾಂ ಗಾಂಜಾ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಕೇರಳದ ಕಣ್ಣೂರು ಜಿಲ್ಲೆಯ ತಾಳಿಪರಂಬ ತಾಲೂಕಿನ ಚಿರುಪುಝಾ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಮಂಗಳೂರಿನ ಕೊಂಚಾಡಿಯ ಶಬರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 104/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(B), 27(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


