ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ಪ್ರಚೋದನಾತ್ಮಕ ಪೋಸ್ಟ್: ಮೂರು ಪ್ರತ್ಯೇಕ ಪ್ರಕರಣ ದಾಖಲು
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸಮಾಜದ ಶಾಂತಿ ಕದಡುವ ರೀತಿಯ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ಆರೋಪದಡಿ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯ ಅ.ಕ್ರ. 95/2026 (ಕಲಂ 78, 126, 103 ಬಿಎನ್‌ಎಸ್-2023 ಹಾಗೂ ಆರ್ಮ್ಸ್ ಆಕ್ಟ್ ಕಲಂ 25, 27) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ವಿವಿಧ ವಾಟ್ಸ್ಆಪ್ ಗುಂಪುಗಳು ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಬರಹಗಳನ್ನು ಹರಿಬಿಟ್ಟಿರುವ ಆರೋಪದಡಿ troll_master.__ ಇನ್‌ಸ್ಟಾಗ್ರಾಂ ಖಾತೆ, Yuva Belthangady, PPadmaraj Padmarajpari, Padmaraj Padmaraj Pari, Yuva Congress Belthangady ಹಾಗೂ Facts and Justice ವಾಟ್ಸ್ಆಪ್ ಗುಂಪುಗಳ ವಿರುದ್ಧ ಅ.ಕ್ರ. 96/2026ರಲ್ಲಿ ಬಿಎನ್‌ಎಸ್-2023ರ ಕಲಂ 196 ಹಾಗೂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ Shailaja Amarnath ಎಂಬ ಫೇಸ್‌ಬುಕ್ ಖಾತೆಯಲ್ಲಿ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಸುಳ್ಳು ಪೋಸ್ಟ್ ಪ್ರಕಟಿಸಿರುವ ಆರೋಪದಡಿ ಅ.ಕ್ರ. 97/2026ರಲ್ಲಿ ಬಿಎನ್‌ಎಸ್-2023ರ ಕಲಂ 353(2) ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಅದೇ ರೀತಿ Chethan Belchada ಎಂಬ ಫೇಸ್‌ಬುಕ್ ಖಾತೆಯಲ್ಲಿ ಪ್ರಕರಣದ ಆರೋಪಿಯ ಭಾವಚಿತ್ರವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿರುವ ಆರೋಪದಡಿ ಅ.ಕ್ರ. 98/2026ರಲ್ಲಿ ಬಿಎನ್‌ಎಸ್-2023ರ ಕಲಂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಮೂರು ಪ್ರಕರಣಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




