ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ; ಮೇಲ್ಛಾವಣಿ ಒಡೆದು ಒಳನುಗ್ಗಿದ ಕಳ್ಳರು
ಬಂಟ್ವಾಳ: ತಾಲೂಕಿನ ಪರಂಗೀಪೇಟೆಯ ಮೆನೆಜಸ್ ಪ್ಲಾಜಾ ಸಂಕೀರ್ಣದಲ್ಲಿರುವ ಕೆನರಾ ಬ್ಯಾಂಕ್‌ನ ಪರಂಗೀಪೇಟೆ ಶಾಖೆಯಲ್ಲಿ ಭಾನುವಾರ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ ವೇಳೆ ದುಷ್ಕರ್ಮಿಗಳು ಬ್ಯಾಂಕಿನ ಮೇಲ್ಛಾವಣಿಯನ್ನು ತುಂಡರಿಸಿ ಒಳನುಗ್ಗಿದ್ದಾರೆ. ಸೋಮವಾರ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಶಾಖೆಯ ಬಾಗಿಲು ತೆರೆದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಬೆರಳಚ್ಚು ತಜ್ಞರ ತಂಡ ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕಿನಿಂದ ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳು ಕಳವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.




