ವಿಟ್ಲ: ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬ್ಯಾಂಕ್ ಖಾತೆ ನೀಡುತ್ತಿದ್ದ ಆರೋಪಿ ಪೊಲೀಸರ ಬಲೆಗೆ
ಮಂಗಳೂರು: ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಪಡೆದು, ಸೈಬರ್ ವಂಚನೆಯ ಹಣದ ವಹಿವಾಟಿಗೆ ನೀಡಿ ಸಹಕರಿಸುತ್ತಿದ್ದ ಆರೋಪಿಯೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಳ್ನಾಡು ಕುಡ್ತಮುಗೇರು ನಿವಾಸಿ ಜುಬೈರ್ (32) ಎಂದು ಗುರುತಿಸಲಾಗಿದೆ. ಜಿಲ್ಲಾ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದ್ದ ‘ಡಿಜಿಟಲ್ ಅರೆಸ್ಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.3ರಂದು ಈತನನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಜುಬೈರ್ ವಿಚಾರಣೆಯ ವೇಳೆ ಆತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿದಂತೆ ರಾಜ್ಯದ ಬೇರೆ ಬೇರೆ ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈತ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ದಸ್ತಗಿರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.





