ಉಪ್ಪಿನಂಗಡಿ: ಕತ್ತಿಯಿಂದ ಪರಸ್ಪರ ಹಲ್ಲೆ ಆರೋಪ-ಎರಡು ಪ್ರತ್ಯೇಕ ಪ್ರಕರಣ ದಾಖಲು
ಉಪ್ಪಿನಂಗಡಿ: ಕತ್ತಿಯಿಂದ ಪರಸ್ಪರ ಹಲ್ಲೆ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸುಳ್ಯ ಐವರ್ನಾಡು ನಿವಾಸಿ ಅಶೋಕ ಕೆ (44ವ) ಎಂಬವರ ದೂರಿನಂತೆ, ತಾನು ಮೇ.12ರಂದು ರಾತ್ರಿ, ತನ್ನ ಹೆಂಡತಿಯ ಮನೆಯಾದ ಬಜತ್ತೂರು ಗ್ರಾಮದ ಕಿಂಡೋವು ಎಂಬಲ್ಲಿ, ಪೊನ್ನಕ್ಕ, ಜಾನಕಿ ಹಾಗೂ ತನ್ನ ಮಾವ ಚೆನ್ನಪ್ಪ ಗೌಡರವರೊಂದಿಗೆ ಮಾತನಾಡುತ್ತಿದ್ದಾಗ, ತನ್ನ ಹೆಂಡತಿಯ ತಂಗಿಯ ಗಂಡನಾದ ರಾಜೇಶ ಎಂಬಾತನು ಅಮಲು ಪದಾರ್ಥ ಸೇವಿಸಿ ಕತ್ತಿಯೊಂದನ್ನು ಹಿಡಿದುಕೊಂಡು ಬಂದು ಕೌಟುಂಬಿಕ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ಬೈದು, ಸ್ಥಳದಲ್ಲಿದ್ದ ಪೊನ್ನಕ್ಕ, ಜಾನಕಿ ಹಾಗೂ ನನಗೆ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ್ದಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜೇಶರವರು ತನ್ನ ಮೇಲೆ ತನ್ನ ಹೆಂಡತಿಯ ಸಹೋದರಿಯ ಗಂಡ ಅಶೋಕ ಹಾಗೂ ತನ್ನ ಮಾವ ಚೆನ್ನಪ್ಪ ಗೌಡರವರು ಕತ್ತಿಯಿಂದ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ನೀಡಿದ ಪ್ರತಿದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




