ವಿಟ್ಲ: ನಾಗರಹಾವು ಕಡಿದು ವ್ಯಕ್ತಿ ಮೃತ್ಯು
ವಿಟ್ಲ: ನಾಗರಹಾವು ಕಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಸೆರ್ಕಳ ಕಾರ್ ಎಂಬಲ್ಲಿ ಇಂದು ಸಂಭವಿಸಿದೆ.

ಸೆರ್ಕಳ ಕಷ್ಕಾರ್ ನಿವಾಸಿ ಆಟೋ ಚಾಲಕ ಹಸೈನಾರ್ (50) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಹಸೈನಾರ್ ಅವರು ತನ್ನ ಮನೆಯ ಬದಿಯಲ್ಲಿ ಇಟ್ಟಿದ್ದ ಹುಲ್ಲು ತೆಗೆಯುವ ಯಂತ್ರವನ್ನು ಕೈಯಿಂದ ಎತ್ತಲು ಮುಂದಾದ ವೇಳೆ ಯಂತ್ರದ ಅಡಿಯಲ್ಲಿ ಅವಿತುಕೊಂಡಿದ್ದ ನಾಗರಹಾವು ಏಕಾಏಕಿ ಅವರಿಗೆ ಕಡಿದಿದೆ. ತಕ್ಷಣವೇ ತೀವ್ರ ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹಸೈನಾರ್ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.





