ಹಂದಿಯ ಚಿಪ್ಪು ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ
ಮಂಗಳೂರು: ನಗರದ ಕದ್ರಿ ಉದ್ಯಾನವನದ ಬಳಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಮಂಗಳವಾರ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ಬೆಂಗಳೂರಿನ ಎಚ್.ಆರ್. ಜಗದೀಶ (50), ಕನಕಪುರ ನಿವಾಸಿ ಸಿದ್ದು ನಾಯ್ಕ (38), ಬನಶಂಕರಿ ನಿವಾಸಿ ಬಾಬು (48) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಚಿಪ್ಪು ಹಂದಿಯ 5.200 ಕಿ.ಗ್ರಾಂ. ತೂಕದ ಚಿಪ್ಪು ಹಾಗೂ ಅಂದಾಜು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಂಗಳೂರು, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್‌ನೆಜ್ಜೂರು ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ದಿಲೀಪ್ ಜಿ.ಆರ್. ಹಾಗೂ ಸಿಬ್ಬಂದಿ ತಾರನಾಥ ಎಸ್. ಮತ್ತು ಅಬ್ದುರವೂಫ್ ಪಾಲ್ಗೊಂಡಿದ್ದರು.




