ಲೆಬನಾನ್ ಮೇಲೆ ಇಸ್ರೇಲ್ ದಾಳಿ, ನೂರಾರು ಮಂದಿ ಸಾವು:ಹಾರ್ಮುಜ್ ಜಲಸಂಧಿ ಮಾರ್ಗ ಮತ್ತೆ ಬಂದ್!
ಟೆಹ್ರಾನ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮತ್ತೆ ಬಂದ್ ಮಾಡಿದೆ. ಅದನ್ನು ದಾಟಲು ಮುಂದಾಗಿದ್ದ ಹಡಗುಗಳನ್ನು ತಡೆಹಿದಿದೆ ಎಂದು ತಿಳಿದುಬಂದಿದೆ.

ಲೆಬನಾನ್ ಗುರಿಯಾಗಿಸಿ ಇಸ್ರೇಲ್ ಪಡೆಗಳು ಭಾರೀ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಗಳನ್ನು ಇರಾನ್ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.
ಪೂರ್ವ ಸೂಚನೆ ಇಲ್ಲದೆ ಹಲವಾರು ಜನನಿಬಿಡ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 300 ಜನರು ಸಾವನ್ನಪ್ಪಿದ್ದು, 1200 ಜನರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಭೂತ ಸೌಲಭ್ಯಗಳಿಗೂ ತೀವ್ರ ಹಾನಿ ಸಂಭವಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಇದರ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮೇಲೆ ತಕ್ಷಣ ಪರಿಣಾಮ ಬೀರಿದೆ. ತೈಲ ಬೆಲೆಗಳು ಏರಿಕೆ ಕಂಡು, ಜಾಗತಿಕವಾಗಿ ಕಚ್ಚಾ ತೈಲವನ್ನು ಸಾಗಿಸುವ ಕಂಪನಿಗಳು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿವೆ ಎನ್ನಲಾಗಿದೆ. ಯುದ್ಧದಾಹಿ ಇಸ್ರೇಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



