ಕಡಬ: ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆ – ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಕಡಬ: ಪರಿಚಯಸ್ಥ ವ್ಯಕ್ತಿಯೊಬ್ಬರು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

ಪ್ರಕರಣದ ದೂರುದಾರರಾದ ಸಂತ್ರಸ್ತ ಮಹಿಳೆಯು ಕಳೆದ ಮೂರು ವರ್ಷಗಳಿಂದ ಪತಿಯಿಂದ ಪ್ರತ್ಯೇಕವಾಗಿ ತನ್ನ ಮಗಳೊಂದಿಗೆ ವಾಸವಿದ್ದರು. ಈ ಅವಧಿಯಲ್ಲಿ ಅವರಿಗೆ ಪ್ರಭಾಕರ ಪಿ. ಎಂಬುವವರ ಪರಿಚಯವಾಗಿ ಅನ್ಯೋನ್ಯದಿಂದಿದ್ದರು ಎನ್ನಲಾಗಿದೆ.
ಎ.3ರಂದು ಸಂತ್ರಸ್ತ ಮಹಿಳೆಯು ಪ್ರಭಾಕರ ಅವರೊಂದಿಗೆ ಮಾತನಾಡಲು ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿಯು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



