ಬಂಟ್ವಾಳ: ಮಾದಕ ವಸ್ತು ಮಾರಾಟ ಪ್ರಕರಣ, ಆರೋಪಿಗೆ ಶಿಕ್ಷೆ ಪ್ರಕಟ
ಮಂಗಳೂರು: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಮೆಲ್ಕಾರ್ ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಶನಿವಾರ ಏಳು ವರ್ಷ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ನಗರದ ಬಂದರು ನಿವಾಸಿ ಟಿ.ಪಿ.ಫಾರೂಕ್ ಶಿಕ್ಷೆಗೊಳಗಾದ ಆರೋಪಿ. ದಂಡ ಪಾವತಿಸುವಲ್ಲಿ ವಿಫಲನಾದರೆ 2 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. 2020ರ ನ.10ರಂದು ಆಗಿನ ಬಂಟ್ವಾಳ ನಗರ ಠಾಣಾ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 49,000 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದರು.
ಬಂಟ್ವಾಳದ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ.ನಾಗರಾಜ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿ ಆರೋಪಿ ಟಿ.ಪಿ.ಫಾರೂಕ್ ಗೆ ಶಿಕ್ಷೆ ವಿಧಿಸಿದ್ದಾರೆ.



