ಬಾವಿ ತೋಡುವಾಗ ಸ್ಪೋಟಕ ಬಳಕೆ: ಪ್ರಕರಣ ದಾಖಲು
ಕಡಬ: ಬಾವಿ ತೋಡುವಾಗ ಸ್ಪೋಟಕ ಬಳಸಿದ ಪರಿಣಾಮ ಮನೆಗಳಿಗೆ ಹಾನಿಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಸಂಭವಿಸಿದೆ.

ಪ್ರಕರಣದ ಆರೋಪಿ ಸೋಮಶೇಖರ್ ಎಂಬವರು ತಮ್ಮ ಜಮೀನಿನಲ್ಲಿ ಬಾವಿ ತೋಡುವ ಕೆಲಸ ಮಾಡಿಸುತ್ತಿದ್ದರು. ಬಾವಿಯೊಳಗಿನ ಗಟ್ಟಿ ಕಲ್ಲನ್ನು ಹುಡಿ ಮಾಡಲು ಅವರು ಕೋಡಿಂಬಾಳ ಗ್ರಾಮದ ಶಿವರಾಮ ಎಂಬವರಿಗೆ ಕೆಲಸ ವಹಿಸಿದ್ದರು. ಮಾ.8ರಂದು ಶಿವರಾಮರವರು ಸ್ಫೋಟಕಗಳನ್ನು ಬಳಸಿ ಕಲ್ಲನ್ನು ಸೀಳಲು ಸಿದ್ಧತೆ ನಡೆಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು. ಜನವಸತಿ ಪ್ರದೇಶವಾದ್ದರಿಂದ ಮತ್ತು ಸಮೀಪದಲ್ಲೇ ಮನೆಗಳಿರುವುದರಿಂದ ಸ್ಫೋಟ ನಡೆಸದಂತೆ ಸಾರ್ವಜನಿಕರು ಎಚ್ಚರಿಕೆ ನೀಡಿದ್ದರು. ಸ್ಫೋಟದಿಂದ ಜೀವ ಮತ್ತು ಆಸ್ತಿ ಹಾನಿಯಾಗುವ ಸಂಭವವಿರುವುದಾಗಿ ತಿಳಿಸಿದರೂ ಕೂಡಾ , ಆರೋಪಿಗಳು ಅದನ್ನು ನಿರ್ಲಕ್ಷಿಸಿ ಸ್ಫೋಟ ನಡೆಸಿದ್ದಾರೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಯಿಂದಾಗಿ ಹತ್ತಿರದ ಮನೆಯೊಂದರ ಕಟ್ಟಿ (ತಳಪಾಯ) ಭಾಗದಲ್ಲಿ ಬಿರುಕು ಬಿಟ್ಟಿರುವುದು ವರದಿಯಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಅಪಾಯಕ್ಕೊಡ್ಡಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS-2023): ಕಲಂ 288, 3(5), ಸ್ಫೋಟಕ ಕಾಯ್ದೆ-1884: ಕಲಂ 9(B) ಪ್ರಕಾರ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





