ಕೇಂದ್ರ ಸರಕಾರ ಗ್ರಾಪಂ ಅಧಿಕಾರವನ್ನು ಕಿತ್ತುಕೊಂಡು ದೇಶದ ಕಟ್ಟ ಕಡೇಯ ವ್ಯಕ್ತಿಗೂ ಅನ್ಯಾಯ ಮಾಡಿದೆ: ಶಾಸಕ ಅಶೋಕ್ ರೈ
ಪುತ್ತೂರು: ಬಡವರ ಕಲ್ಯಾಣಕ್ಕಾಗಿ ಮನರೇಗಾ ಯೋಜನೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಿತ್ತು ಇದರಿಂದ ದೇಶದ ಕೋಟ್ಯಂತರ ಬಡವರಿಗೆ ನೆರವಾಗಿದೆ, ಈ ಯೋಜನೆಯನ್ನು ಕೇಂದ್ರದ ಬಿಜೆಪಿ ಸರಕಾರ ಪರೋಕ್ಷವಾಗಿ ರದ್ದುಪಡಿಸಿದ್ದು ಮಾತ್ರವಲ್ಲದೆ ಇದು ದೇಶದ ಬಡವರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಕಾವುನಿಂದ ಆರಂಭಗೊಂಡ ಮನ್ ರೇಗಾ ಬಚಾವ್ ಸಂಗ್ರಾಮದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರದ ಬಿಜೆಪಿ ಸರಕಾರ ನರೇಗಾ ಯೋಜನೆಗೆ ಕತ್ತರಿ ಹಾಕುವ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ಅಳಿಸಿದ್ದು ಮಾತದರವಲ್ಲದೆ ದೇಶದ ಕಟ್ಟಕಡೇಯ ವ್ಯಕ್ತಿಗೂ ಅನ್ಯಾಯ ಮಾಡಿದೆ. ಜಿಲ್ಲೆಗೆ ಇದುವರೆಗೆ ನರೇಗಾ ಯೋಜನೆಯ ಮೂಲಕ 260ಕೋಟಿ ಕೂಲಿ ನೀಡಲಾಗಿದೆ. ಕೇಂದ್ರದ ಹೊಸ ಕಾನೂನಿನ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದ ಯಾವುದೇ ಕೂಲಿ,ಕಾಮಗಾರಿ ನಡೆಯುವುದು ಸಾಧ್ಯವಿಲ್ಲ. ಕೇಂದ್ರದ ನಿರ್ಧಾರದ ವಿರುದ್ದ ಪಕ್ಷಾತೀತವಾಗಿ ದೇಶಾಧ್ಯಂತ ಹೋರಾಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಡವರ ಪರ ಕಾಂಗ್ರೆಸ್ ಮಾತ್ರ ಎಂಬುದನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದಾರೆ ಎಂದು ಶಾಸಕರು ಹೇಳಿದರು.


ಪಾದಯಾತ್ರೆಯು ಕಾವಿನಿಂದ ಕುಂಬ್ರ ತನಕ ನಡೆಯಿತು. ನೂರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಪಕ್ಷದ ಪ್ರಮುಖರಾದ ಇನಾಯತ್ ಆಲಿ, ಐವನ್ ಡಿಸೋಜಾ, ಬಿ ರಮಾನಾಥ ರೈ, ಕಾವು ಹೇಮನಾಥ ಶೆಟ್ಟಿ, ಎಂ ಎಸ್ ಮಹಮ್ಮದ್, ಕೃಷ್ಣ ಪ್ರಸಾದ್ ಆಳ್ವ, ಫಾರೂಕ್ ಬಾಯಬ್ಬೆ, ಯು ಟಿ ತೌಸೀಪ್, ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ಶ್ರೀ ಪ್ರಸಾದ್ ಪಾಣಾಜೆ, ಚಂದ್ರಪ್ರಭಾ ಗೌಡ ಪುತ್ತೂರು ,ಫಾರೂಕ್ ಪೆರ್ನೆ, ಅಖಿಲ್ ಕಲ್ಲಾರೆ ಸಹಿತ ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.





