29 ವರ್ಷಗಳ ಹಿಂದಿನ ಉರ್ವ ಜೋಡಿ ಕೊಲೆ ಪ್ರಕರಣ: ಆರೋಪಿ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನ ಬಂಧನ
ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 29 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ, ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ ಚಿಕ್ಕ ಹನುಮ ಯಾನೆ ಚಿಕ್ಕ ಹನುಮಂತಪ್ಪ ಯಾನೆ ಕೆ.ಕೃಷ್ಣಪ್ಪ ಯಾನೆ ಕೃಷ್ಣ ಎಂಬಾತನನ್ನು ಉರ್ವ ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ.

ದಂಡುಪಾಳ್ಯ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿದ್ದ ಈ ಗ್ಯಾಂಗ್‌ನ ಸದಸ್ಯನಾಗಿದ್ದ ಚಿಕ್ಕ ಹನುಮ ಮೂಲತಃ ಬೆಂಗಳೂರಿನ ಹೊಸಕೋಟೆ ತಾಲೂಕಿನ ನಿವಾಸಿ. ಈತ ಪ್ರಸಕ್ತ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ವಿಜಯನಗರ ಕಾಲನಿಯ ಮದನಪಳ್ಳೆ ಎಂಬಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
1997ರ ಅ.11ರಂದು ರಾತ್ರಿ ಉರ್ಷ ಮಾರಿಗುಡಿ ಕ್ರಾಸ್ ಬಳಿಯ ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದ ಲಾವಿಸ್ ಡಿಮೆಲ್ಲೋ (80) ಹಾಗೂ ರಂಜಿತ್ ವೇಗಸ್ (19) ಎಂಬವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉರ್ವ ಠಾಣಾ ಪೊಲೀಸರು ಆರೋಪಿಗಳಾದ ದಂಡುಪಾಳ್ಯ ಗ್ಯಾಂಗ್‌ನ ದೊಡ್ಡ ಹನುಮ, ಮೆಕಟೇಶ, ಮುನಿಕೃಷ್ಣ ನಲ್ಲ ತಿಮ್ಮ ಮಡುಪಾಳ್ಯ ಕೃಷ್ಣ ಕೃಷ್ಣಾಡು, ರಮೇಶ್ ಎಂಬವರನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಚಿಕ್ಕ ಹನುಮನ ಬಂಧನವಾಗಿರಲಿಲ್ಲ ಈತ ಹೆಸರು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ ಕಡನ ಮೇಲೆ ಮಂಗಳೂರು ಜೆಎಂಎಫ್ಸಿ 2ನೇ ನ್ಯಾಯಾಲಯವು 2010ರಲ್ಲಿ ವಾರೆಂಟ್ ಹೊರಡಿಸಿತ್ತು. ಈತನ ಮೇಲೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಉರ್ವ ಠಾಣೆಯ ನಿರೀಕ್ಷಕ ಶ್ಯಾಮ್ ಸುಂದರ್ ಎಚ್. ಎಂ., ಪಿ ಎಸ್ ಐ ಗಳಾದ ಗುರಪ್ಪಕಾಂತಿ, ಎಲ್. ಮಂಜುಳಾ, ಎಎಸ್ ಐ ವಿನಯಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮೀ, ಅನಿಲ್, ಪ್ರಮೋದ್, ಆತ್ಮಾನಂದ ಹರೀಶ್ ಪಾಲ್ಗೊಂಡಿದ್ದರು.
ಈ ತಂಡಕ್ಕೆ ಬಹುಮಾನಕ್ಕಾಗಿ ರಾಜ್ಯ ಡಿಜಿ ಐಜಿಪಿಗೆ ಶಿಫಾರಸು ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ





