ಪುತ್ತೂರು: ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ವಾರ್ಷಿಕ ಮಹಾಸಭೆ
ಪುತ್ತೂರು: ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬಸ್ಥರು ಅತ್ಯಂತ ನೋವಿನಿಂದ ಇರುತ್ತಾರೆ. ಆ ಕಾರಣಕ್ಕೆ ಕೆಲವರು ಇಲ್ಲಿನ ಸಿಬ್ಬಂದಿ ಜೊತೆ ಕೋಪದಿಂದ ವರ್ತಿಸಬಹುದು. ಅಂತಹ ಸಂದರ್ಭದಲ್ಲಿ ಆಸತ್ರೆಯ ಸಿಬ್ಬಂದಿ ದರ್ಪ ತೋರಿಸದೆ ತಾಳ್ಮೆಯಿಂದ ವರ್ತಿಸಬೇಕು, ರೋಗಿಗಳ ಮನಸ್ಸಿಗೆ ನೋವಾಗುವ ಸಂಗತಿ ಆಸ್ಪತ್ರೆಯಲ್ಲಿ ನಡೆಯಬಾರದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಪುತ್ತೂರು ತಾಲೂಕು ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶನಿವಾರ ನಡೆದ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಬನ್ನೂರಿನಲ್ಲಿ ನಿಗಧಿತ ಜಾಗದಲ್ಲೇ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಮೆಡಿಕಲ್ ಕಾಲೇಜು ನಿರ್ಮಾಣವಾದ ಬಳಿಕ ಈಗ ಇರುವ ಸರಕಾರಿ ಆಸ್ಪತ್ರೆಯನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಪಡಿಸಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮಾರ್ಪಡಿಲಾಗುತ್ತದೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ ಮೆಡಿಕಲ್ ಕಾಲೇಜ್ ಬಗ್ಗೆ ಮುಖ್ಯಮಂತ್ರಿ ಜೊತೆಯೂ ಮಾತನಾಡಿದ್ದೇನೆ. ಶೀಘ್ರವೇ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸುದೇಶ್ ಶೆಟ್ಟಿ ಮಾತನಾಡಿ, ಆಸ್ಪತ್ರೆಯ ಲ್ಯಾಬ್ ನಲ್ಲಿ ಸಿಬ್ಬಂದಿ ಬೇಡಿಕೆ ಇದ್ದು ಗುತ್ತಿಗೆ ಆಧಾರದಲ್ಲಿ ಅವರನ್ನು ನೇಮಕಮಾಡಿದರೆ ಇನ್ನಷ್ಟು ಸೇವೆ ನೀಡಲು ಸಾಧ್ಯವಾಗುತ್ತದೆ. ಆಂಬುಲೆನ್ಸ್ನ ಬೇಡಿಕೆಯೂ ಇದೆ. ಹೊರ ರೋಗಿಗಳು ರಕ್ತ ಪರೀಕ್ಷೆಗೆ ಹೊರಗಡೆ ಲ್ಯಾಬ್ ಗೆ ಹೋದಾಗ ಅವರಿಗೆ ಪ್ರಥಮ ಆಧ್ಯತೆಯನ್ನು ಕೊಡಬೇಕು ಮತ್ತು ಅವರಿಗೆ ಬಿಲ್ನಲ್ಲಿ ಡಿಸ್ಕೌಂಟ್ ನೀಡಬೇಕು. ಆಸ್ಪತ್ರೆಗೆ ವಾಚ್ ಮೆನ್ ನೇಮಕ ಮಾಡಬೇಕು. ವಿಕಲಚೇತನರು ಪ್ರಮಾಣ ಪತ್ರಕ್ಕಾಗಿ ಬಂದಲ್ಲಿ ಅವರಿಗೆ ಆದಷ್ಟು ಮಾನವೀಯತೆ ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸಹಾಯ ಮಾಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಆರೋಗ್ಯ ರಕ್ಷಾ ಸಮಿತಿಯ ಇತರ ಸದಸ್ಯರಾದ ಅನ್ವರ್ ಕಬಕ, ಆಸ್ಕರ್ ಆನಂದ್ ಮತ್ತು ಸಿದ್ದೀಕ್ ಸುಲ್ತಾನ್ ಸಹಮತ ವ್ಯಕ್ತಪಡಿಸಿದರು.
ಪುತ್ತೂರಿಗೆ ಅಗತ್ಯ ಬಿದ್ದರೆ ಉಪ್ಪಿನಂಗಡಿಯಲ್ಲಿರುವ ಆಂಬುಲೆನ್ಸ್ ತರಿಸಿ, ಬಳಸಿಕೊಳ್ಳಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ.ಅಮಿತ್, ರಕ್ಷಾ ಸಮಿತಿ ಸದಸ್ಯರಾದ ವಿಕ್ಟರ್ ಪಾಯಸ್ ಮತ್ತು ಅರುಣಾ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ.ಯದುರಾಜ್ ವರದಿ ವಾಚಿಸಿದರು. ಸಿಬ್ಬಂದಿ ತಾರನಾಥ ಕಾರ್ಯಕ್ರಮ ನಿರೂಪಿಸಿದರು.