ಧರ್ಮಸ್ಥಳ ವಿರುದ್ದ ಅಪಪ್ರಚಾರ ಕೊನೆಯಾಗಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್
ಉಡುಪಿ: ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಗೆ ಪೂರ್ಣ ವಿರಾಮ ಬೀಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದ್ದಾರೆ. ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತಿಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಧರ್ಮಸ್ಥಳ ಮಂಜುನಾಥನ ಭಕ್ತರು. ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಬದ್ದತೆ, ಕಾಳಜಿ, ಅಲ್ಲಿನ ಕೆಲಸ ಮೆಚ್ಚಿಕೊಂಡವರು. ಇದೀಗ ಎಸ್‌ಐಟಿ ತನಿಖೆ ನಡೆಯುತ್ತಿದೆ. ಷಡ್ಯಂತ್ರದ ಬಗ್ಗೆ ಡಿಸಿಎಂ ಅವರಿಗೆ ಗೊತ್ತಿದೆ. ನಾನು ಅವರು ನೀಡಿದ ಹೇಳಿಕೆಗೆ ಧ್ವನಿಗೂಡಿಸುತ್ತೇನೆ ಎಂದರು.
ವಿಧಾನಸಭೆಯ ಒಳಗೂ, ಹೊರಗೂ ಡಿಕೆಶಿ ಇದೊಂದು ಷಡ್ಯಂತ್ರ ಅಂತ ಹೇಳಿದ್ದಾರೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು ಎಂದು ಹೇಳಿದ್ದಾರೆ, ಒಟ್ಟಿನಲ್ಲಿ ಜನರ ಎದುರು ಸತ್ಯಾಂಶ ಬಹಿರಂಗಗೊಳ್ಳಬೇಕು ಎಂದರು.