ದಿಗಂತ್ ನಾಪತ್ತೆ ಪ್ರಕರಣ: ಪ್ರಚೋದನೆ ಮಾಡಿದವರ ವಿರುದ್ಧ ಕ್ರಮಕ್ಕೆ ರಮಾನಾಥ ರೈ ಆಗ್ರಹ
ಮಂಗಳೂರು: ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಕೆಲವು ಮತೀಯವಾದಿ ಸಂಘಟನೆಗಳು ಜನರ ಮನಸ್ಸಲ್ಲಿ ತಪ್ಪು ಭಾವನೆ ಮೂಡಿಸಿ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದು ಪ್ರಚೋದನೆ ನೀಡಿದ ಮುಖಂಡರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣವನ್ನು ನಾಪತ್ತೆ ಎಂದಷ್ಟೇ ಪರಿಗಣಿಸಿದ್ದರೆ ಅದೊಂದು ಆದರ್ಶ ರಾಜಕಾರಣವಾಗುತ್ತಿತ್ತು. ಆದರೆ ಸುಳ್ಳು ಕತೆ ಕಟ್ಟಿ ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡಿದರು. ಪೊಲೀಸರು ವಿದ್ಯಾರ್ಥಿಯನ್ನು ಪತ್ತೆಹಚ್ಚಿದ್ದರಿಂದ ಜಿಲ್ಲೆಯಲ್ಲಿ ದೊಡ್ಡ ಘರ್ಷಣೆ ಸಂಭವಿಸುವುದು ತಪ್ಪಿದೆ ಎಂದರು.
ಕೊಲೆಗಳು ನಡೆದಾಗ ಯಾವುದೇ ಆಧಾರವಿಲ್ಲದೇ ಅದನ್ನು ನಮ್ಮ ತಲೆಗೆ ಕಟ್ಟುಕ ಕೆಲಸ ಮಾಡಿದ್ದಾರೆ. ಈ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡದೇ ಜನರು ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ ಪ್ರದರ್ಶಿಸಬೇಕು’ ಎಂದರು. ಜಾತ್ಯತೀತ ನಿಲುವು ಹೊಂದಿದ ಕಾಂಗ್ರೆಸ್ ಯಾವತ್ತೂ ಪ್ರತೀಕಾರದ ರಾಜಕಾರಣ ಮಾಡಿಲ್ಲ. ಜಿಲ್ಲೆಯಲ್ಲಿ ಧರ್ಮ, ದೇವರು, ದೇಶಪ್ರೇಮದ ಹೆಸರಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ’ ಎಂದು ರಮಾನಾಥ ರೈ ಹೇಳಿದರು.