ಮಾಜಿ ಸಂಸದ ನಳಿನ್ ಕುಮಾರ್, ಎಂಎಲ್ಸಿ ಕಿಶೋರ್ ಬೊಟ್ಯಾಡಿಗೆ ಸವಾಲು ಹಾಕಿದ ಶಾಸಕ ಅಶೋಕ್ ರೈ
ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹತ್ತಿಪ್ಪತ್ತು ವರ್ಷ ಸಂಸದರಾಗಿ ಇಲ್ಲಿ ಏನು ಸಾಧನೆ ಮಾಡಿದ್ದಾರೆ? ನನ್ನ ಬಾಯಿಗೆ ಕೈ ಹಾಕಲು ಬರಬೇಡಿ, ಬಂದಲ್ಲಿ ನಿಮಗೆ ಬಿಡಲು ನನ್ನ ಬಳಿ 10 ಸಾವಿರ ಬಾಣಗಳಿದೆ. ಅದೇ ರೀತಿ ಎಂಎಲ್ಸಿ ಕಿಶೋರ್ ಬೊಟ್ಯಾಡಿ ಅವರ ಎಲ್ಲಾ ಬಯೋಡಾಟ ನನ್ನಲ್ಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ದೇವಸ್ಥಾನದ ಜಾಗದಲ್ಲಿದ್ದ ರಾಜೇಶ್ ಬನ್ನೂರು ಮನೆ ತೆರವು ವಿಚಾರವಾಗಿ ನಳಿನ್ ಕುಮಾರ್ ಕಟೀಲ್ ಮತ್ತು ಎಂಎಲ್ಸಿ ಕಿಶೋರ್ ಬೊಟ್ಯಾಡಿ ಅವರ ಅರೋಪಕ್ಕೆ ಫೆ.11ರಂದು ದೇವಳದ ಪುಷ್ಕರಣಿಯ ಬಳಿ ನಡೆದ ಭಕ್ತರ ಕರಸೇವೆ ವೇಳೆ ಶಾಸಕ ಅಶೋಕ್ ರೈ ತಿರುಗೇಟು ನೀಡಿದರು.
ಮಾಜಿ ಸಂಸದ ಕಟೀಲ್ ವಿರುದ್ಧ ಮಾತನಾಡಿದ ಶಾಸಕರು ನಿಮ್ಮ ಆರೋಪಕ್ಕೆ ನಾನು ಉತ್ತರ ಕೊಟ್ಟರೆ ನಿಮಗೆ ತೊಂದರೆ ಆದೀತು ಎಂದರು. ಕಿಶೋರ್ ಬೊಟ್ಯಾಡಿ ನನ್ನ ಆತ್ಮೀಯರು, ಆದರೆ ಅವರು ಎಂಎಲ್ಸಿ ಆದ ಮೇಲೆ ಏನು ಮಾಡಿದ್ದಾರೆ, ಗೂಂಡಾಗಿರಿ ಬಗ್ಗೆ ಮಾತನಾಡುವ ಅವರು ತಾಕತ್ತಿದ್ದರೆ ಪುತ್ತೂರಿನ ಅಭಿವೃದ್ಧಿಗೆ 50 ಕೋಟಿ ರೂ ಅನುದಾನ ತರಲಿ ನೋಡೋಣ ಎಂದು ಸವಾಲು ಹಾಕಿದರು. ನಿಮ್ಮ ಮಾತುಗಳು ನಮಗೆ ನೋವು ತಂದಿದೆ, ಧರ್ಮದಲ್ಲಿ ರಾಜಕಾರಣ ಮಾಡಬೇಡಿ ಎಂದು ಶಾಸಕ ಅಶೋಕ್ ರೈ ಇದೇ ಸಂದರ್ಭದಲ್ಲಿ ಹೇಳಿದರು.