ಕಡಬ: ಮನೆಗೆ ನುಗ್ಗಿ ಕಳ್ಳತನ, ಆರೋಪಿ ಬಂಧನ
ಕಡಬ ಠಾಣಾ ವ್ಯಾಪ್ತಿಯ ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳನನ್ನು ಪೋಲೀಸರು ಗುರುವಾರ ಕರ್ಮಾಯಿ ನಿವಾಸಿ ಸಿನು ಕುರಿಯನ್ ಎಂಬಾತನನ್ನು ಬಂಧಿಸಿದ್ದಾರೆ.
ಕ್ಷಿಪ್ರ ಕಾರ್ಯಾಚನೆ ನಡೆಸಿರುವ ಕಡಬ ಪೊಲೀಸರು ಐದೇ ದಿನದಲ್ಲಿ ಕಳ್ಳನನ್ನು ಪತ್ತೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಕೆರ್ಮಯಿ ಚರ್ಚ್ ಸಮೀಪದ, ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು ಪತ್ನಿ ಹಾಗೂ ಮಗನೊಂದಿಗೆ ಮನೆಗೆ ಬೀಗ ಹಾಕಿ ಚರ್ಚ್ ಪ್ರಾರ್ಥನೆಗಾಗಿ ಭಾನುವಾರ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಕಳ್ಳತನ ಆಗಿರುವ ಮನೆಯಿಂದ ಕೂಗಳತೆ ದೂರದಲ್ಲಿರುವ ಮನೆಯ ಯುವಕನೇ ಈ ಕಳ್ಳತನದ ರೂವಾರಿ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಕಳ್ಳತನ ಪ್ರಕರಣದ ಬೆನ್ನತ್ತಿದ ಪೊಲೀಸರು ಹಲವು ಮಹತ್ವದ ಸುಳಿವುಗಳ ಆಧಾರದಲ್ಲಿ ಸಿನು ಕುರಿಯನ್ ನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬೈಕ್ ನಲ್ಲಿ ಬಂದು ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿದ್ದಾನೆ, ಅಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈತ ಕಡಬದ ಬಟ್ಟೆ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಳ್ಳತನವಾಗಿರುವ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಳ್ಳತನ ಮಾಡಿರುವ ಹಣದಲ್ಲಿ ಸಾಲವನ್ನು ತೀರಿಸಿ ಉಳಿದ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷ ರವಿ ಬಿ.ಎಸ್., ಕಡಬ ಠಾಣಾ ಎಸ್.ಐ ಅಭಿನಂದನ್, ತನಿಖಾ ಎಸ್.ಐ ಅಕ್ಷಯ್ ಡವಗಿ, ಹೆಡ್ ಕಾನ್ ಸ್ಟೆಬಲ್ ಹರೀಶ್ ,ಕಾನ್ಸ್ಟೇಬಲ್ ಗಳಾದ ಸಿದ್ದಪ್ಪ,ಹರ್ಷಿತ್ ಪಾಲ್ಗೊಂಡಿದ್ದರು.