ಕರಾವಳಿಕ್ರೈಂ

ಕಡಬ: ನಾಪತ್ತೆಯಾಗಿದ್ದ ಯುವಕ ಕಾಡಿನಲ್ಲಿ ಶವವಾಗಿ ಪತ್ತೆ

ಕಡಬ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ.ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 1.5 ಕಿ.ಮೀ. ದೂರ ನಾರಡ್ಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಡಿ.2ರಂದು ಪತ್ತೆಯಾಗಿದೆ.

ಸಂದೀಪ್ ನನ್ನು ಆತನ ಸ್ನೇಹಿತ, ನೆಟ್ಟಣ ನಿವಾಸಿ ಪ್ರತೀಕ್‌ ಎಂಬಾತನು ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ತನಿಖೆಯಿಂದ ಬಯಲಾಗಿದೆ.

ಸಂದೀಪ್‌ ಮರ್ದಾಳದಲ್ಲಿ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು, ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ನಾಪತ್ತೆಯಾಗಿದ್ದ. ಆತ ಕೆಲಸ ಮುಗಿಸಿ ಪ್ರತೀಕ್‌ ಜತೆಗೆ ಕಾರಿನಲ್ಲಿ ಹೋಗಿರುವುದಾಗಿ ತಾಯಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕ್‌ ಹಾಗೂ ಇನ್ನೋರ್ವನನ್ನು ಪೊಲೀಸರು ನ.1ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಆರೋಪಿಯನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆ ತಂದ ವೇಳೆ ಆತನನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್‌ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕೊಲೆಗೈದು ಮೃತದೇಹ‌ವನ್ನು ಕಾಡಿಗೆ ಸಾಗಿಸಲು ಒಬ್ಬನೇ ವ್ಯಕ್ತಿಗೆ ಸಾಧ್ಯವಿಲ್ಲ. ಕೃತ್ಯದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು. ಪ್ರತೀಕ್ ಗಾಂಜಾ ವ್ಯಸನಿ ಎನ್ನುವ ಸುದ್ದಿಯೂ ಹರಿದಾಡುತ್ತಿದ್ದು ಎಲ್ಲವೂ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಡಿ.3ರಂದು ಮೃತದೇಹವನ್ನು ಬಿಳಿನೆಲೆ ಗ್ರಾಪಂ ಎದುರು ಇರಿಸಿ ಆಕ್ರೋಶಿತ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!