ಬಿಜೆಪಿ ಬಣ ಸಂಘರ್ಷ: ಅಸಮಾಧಾನ ಹೊರ ಹಾಕಿದ ಡಿ.ವಿ ಸದಾನಂದ ಗೌಡ
ಬೆಂಗಳೂರು: ಬಿಜೆಪಿ ಪಕ್ಷದೊಳಗೆ ನಾಯಕರ ನಡುವಿನ ಗುಂಪುಗಾರಿಕೆಗೆ ಬಿಜೆಪಿ ಮುಖಂಡ ಡಿವಿ ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತನಗೆ ಅವಕಾಶ ನೀಡಿದ ಬಿಜೆಪಿ ಪಕ್ಷಕ್ಕೆ ಇವತ್ತು ಒದಗಿಬಂದಿರುವ ಸ್ಥಿತಿ ಒಂದು ದುರಂತ ಹಾಗೂ ನೋವಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಕ್ಫ್ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ಹೇಳಿದರು.
ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಾನಂದ ಗೌಡ ಅವರು ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು, ಪಕ್ಷದೊಳಗಿನ ಗುಂಪುಗಾರಿಕೆ ಬಗ್ಗೆ ಹೈಕಮಾಂಡ್‌ನ ಮೌನ ಮುರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.