ಮುಮ್ತಾಜ್ ಅಲಿ ಕಾರು ಅಪಘಾತ ಸ್ಥಿತಿಯಲ್ಲಿ ಪತ್ತೆ ಪ್ರಕರಣ: ಖಾಸಗಿ ಬಸ್’ಗೆ ಡಿಕ್ಕಿ ಹೊಡೆದಿದ್ದ ಕಾರು
ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ (52.ವ) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳು ಹೊರ ಬರುತ್ತಿದೆ. ಮುಮ್ತಾಜ್ ಅಲಿ ಅವರು ಚಲಾಯಿಸುತ್ತಿದ್ದ ಕಾರು ಮುಂಜಾನೆ 4 ಗಂಟೆ ಸುಮಾರಿಗೆ ಕೂಳೂರಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೈಕಂಪಾಡಿಯಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಘಟನೆಯಿಂದ ಕಾರಿನ ನಂಬರ್ ಪ್ಲೇಟ್ ಅಲ್ಲೇ ಕಳಚಿಬಿದ್ದಿತ್ತು. ಅಪಘಾತದ ಸಂಭವಿಸಿದ ಬಳಿಕವೂ ಮಮ್ತಾಜ್ ಅಲಿ ಅವರು ಕಾರನ್ನು ನಿಲ್ಲಿಸದೇ ಕಾರು ಚಲಾಯಿಸಿದ್ದರು ಎನ್ನಲಾಗಿದೆ.
ಅಲ್ಲದೇ ಅವರ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಂಜಾನೆ 5.09ರ ಸುಮಾರಿಗೆ ಅವರ ಮಗಳು ಕೂಳೂರು ಸೇತುವೆಯಲ್ಲಿ ಕಾರು ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ 4.40 ಮತ್ತು 5.09ರ ನಡುವೆ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪೊಲೀಸ್ ತನಿಖೆಯಿಂದ ಸ್ಪಷ್ಟ ಚಿತ್ರಣ ಸಿಗಲಿದೆ. ಮುಮ್ತಾಜ್ ಅಲಿ ಅವರು ಸುರಕ್ಷಿತವಾಗಿ ಬರಲಿ ಎಂದು ನೂರಾರು ಮಂದಿ ಪ್ರಾರ್ಥಿಸುತ್ತಿದ್ದಾರೆ.