ಬೆಳ್ತಂಗಡಿ: ಮಾದಕ ವಸ್ತು ಗಾಂಜಾ ಹೊಂದಿದ್ದ ಯುವಕ ಪೊಲೀಸ್ ವಶಕ್ಕೆ
ಬೆಳ್ತಂಗಡಿ: ಮಾದಕ ವಸ್ತು ಹೊಂದಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ, ಸಬರಬೈಲು ಬಸ್ ನಿಲ್ದಾಣದ ಬಳಿ ಆ.31ರಂದು ರಾತ್ರಿ ನಡೆದಿದೆ.
ಕುವೆಟ್ಟು ಗ್ರಾಮದ ಸಬರಬೈಲು ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ್ ಟಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು ಆ ವೇಳೆ ಸದ್ರಿ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ ವ್ಯಕ್ತಿಯನ್ನು ಪರಿಶೀಲಿಸಿದಾಗ ಆತನ ಬಳಿ ಚೀಲದಲ್ಲಿ ಅಂದಾಜು 20,000/- ರೂ ಮೌಲ್ಯದ, 1,150 ಗ್ರಾಂ ಮಾದಕ ವಸ್ತುವಾದ ಗಾಂಜಾ ಕಂಡು ಬಂದಿರುತ್ತದೆ. ಆರೋಪಿಯನ್ನು ಕುವೆಟ್ಟು ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ (37) ಎಂದು ಗುರುತಿಸಲಾಗಿದೆ.
ಆರೋಪಿಯು ಹೆಚ್ಚಿನ ಹಣ ಸಂಪಾದನೆಗಾಗಿ ಮಾರಾಟ ಮಾಡಲು ಕೇರಳ ರಾಜ್ಯದಿಂದ ಗಾಂಜಾ ತಂದಿರುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಮಾದಕವಸ್ತುವನ್ನು ಆರೋಪಿತನೊಂದಿಗೆ ವಶಕ್ಕೆ ಪಡೆದು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 43/2024 ಕಲಂ : 8(c) 20(ಬಿ((ii))(ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.