ಸಾನಿಯಾ-ಶಮಿ ಮದುವೆ ವದಂತಿ: ಮೌನ ಮುರಿದ ಶಮಿ
ಕಳೆದ ಕೆಲವು ಸಮಯಗಳಿಂದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮದುವೆಯಾಗಲಿದ್ದಾರೆ ಎಂದು ವದಂತಿ ಹಬ್ಬಿತ್ತು. ಶಮಿ ಅವರು ತಮ್ಮ ಪತ್ನಿಗೆ ವಿಚ್ಚೇದನ ನೀಡಿದ್ದು ಸಾನಿಯಾ ಮಿರ್ಜಾ ಕೂಡಾ ಪತಿ ಶೋಯೆಬ್ ಮಲಿಕ್ ಅವರಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದರು. ಹೀಗಾಗಿ ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು.
ಈ ಬಗ್ಗೆ ಇದೀಗ ಮೊದಲ ಬಾರಿಗೆ ಶಮಿ ಮೌನ ಮುರಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಜನರನ್ನು ಕೇಳಿಕೊಂಡರು. ಅಂತಹ ವಿಚಾರಗಳು ಮನರಂಜನೆಯನ್ನು ನೀಡಬಹುದಾದರೂ ಅವು ಹಾನಿಕಾರಕವೂ ಆಗಿರಬಹುದು ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳೊಂದಿಗೆ ಎಲ್ಲರೂ ಜವಾಬ್ದಾರರಾಗಿರಬೇಕು, ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ತಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕಳೆದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.