ಹಿಂ.ಜಾ.ವೇ ಮುಖಂಡನ ಬಂಧನ ಖಂಡಿಸಿ ಪುತ್ತೂರಿನಲ್ಲಿ ದೊಂದಿ ಹಿಡಿದು ಪ್ರತಿಭಟನೆ
ಪುತ್ತೂರು: ಕೋಮು ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರನ್ನು ಗೌರಿಬಿದನೂರು ಪೊಲೀಸರು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ಪುತ್ತೂರು ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ಆ.21ರಂದು ದರ್ಬೆಯಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಹಿಂದು ಜಾಗರಣ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ಹರೀಶ್ ಶಕ್ತಿನಗರ ಮಾತನಾಡಿ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರನ್ನು ಯಾರದ್ದೋ ಒತ್ತಡಕ್ಕೆ ಪೊಲೀಸರು ಬಂಧಿಸಿರುವುದು, ಸುಮೋಟೋ ಕೇಸು ದಾಖಲಿಸಿರುವುದು ಖಂಡನೀಯ. ಭವ್ಯ ಭಾರತ, ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ನಿಮ್ಮ ಮಕ್ಕಳಿಗೆ ಇಟ್ಟ ಹೆಸರು ಬದಲಾಗುವುದಕ್ಕೂ ಹೆಚ್ಚು ದಿನ ಉಳಿದಿಲ್ಲ ಎಂದು ಹೇಳಿದರು.
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ ನಮ್ಮ ಸಂಘಟನೆಯ ಮುಖಂಡರ ಮೇಲೆ ಕೇಸು ದಾಖಲಿಸಿ ದಬ್ಬಾಳಿಕೆ ನಡೆಸಿದರೆ ಹಿಂದು ಸಮಾಜ ಸಹಿಸುವುದಿಲ್ಲ, ದಬ್ಬಾಳಿಕೆಗೆ ಸರಿಯಾದ ಉತ್ತರ ಕೊಡಲು ಹಿಂದು ಸಮಾಜ ಸಿದ್ಧವಿದೆ ಎಂದರು.
ಹಿಂದು ಜಾಗರಣ ವೇದಿಕೆ ಮುಖಂಡ, ನ್ಯಾಯವಾದಿ ಚಿನ್ಮಯ್ ರೈ ಅವರು ಮಾತನಾಡಿ ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡಬಾರದು, ಹಿಂದುತ್ವಕ್ಕೆ ತೊಂದರೆ ಆದಾಗ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದರು. ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕ್ ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.