ಗ್ರಾಮ ಪಂಚಾಯತ್: ಮಗಳು ಅಧ್ಯಕ್ಷೆ, ತಾಯಿ ಉಪಾಧ್ಯಕ್ಷೆ..!
ಒಂದೇ ಮನೆಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ. ಆಶ್ಚರ್ಯ ಆದರೂ ಸತ್ಯ. ತಾಯಿ ಮತ್ತು ಮಗಳು ಒಂದೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿರುವ ಅಪರೂಪದ ಘಟನೆ ಕಡೂರು ತಾಲೂಕಿನ ಗರ್ಜೆ ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.
ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಜೊತೆಗೆ ಗೆಲುವು ಸಾಧಿಸಿದ ಪಂಚಾಯತ್‍ನ ಒಟ್ಟು 7 ಜನ ಸದಸ್ಯರಲ್ಲಿ ಮೊದಲಿನಿಂದಲೂ 3 ಮತ್ತು 4 ಜನ ಸದಸ್ಯರ ಎರಡು ಗುಂಪುಗಳಿದ್ದವು. ತಾಯಿ ನೇತ್ರಾವತಿ ಮತ್ತು ಮಗಳು ಸ್ನೇಹಾ ಬೆಂಬಲದಿಂದ ನಾಲ್ಕು ಜನರ ಗುಂಪಿನ ಎನ್.ಆರ್.ರಂಜಿತಾ ಮತ್ತು ಎಂ.ಎಲ್.ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ರಂಜಿತಾ ಮತ್ತು ಪ್ರಕಾಶ್, ನೇತ್ರಾವತಿ ಮತ್ತು ಸ್ನೇಹಾ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ತಾಯಿ ಮತ್ತು ಮಗಳು ಅಧಿಕಾರಕ್ಕೇರಿದ್ದಾರೆ. ಬದಲಾದ ಮೀಸಲಾತಿ ಮತ್ತು 4 ಸದಸ್ಯರ ನಡುವಿನ ಒಗ್ಗಟ್ಟು ಚುನಾವಣೆಯಲ್ಲಿ ತಾಯಿ, ಮಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆ.