ಕೊನೆಗೊಳ್ಳುತ್ತಾ ಸುಳ್ಯ ಕಾಂಗ್ರೆಸ್’ ನೊಳಗಿನ ಬಣ ರಾಜಕೀಯ
ಸುಳ್ಯ ವಿಧಾನಸಬಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಭಿನ್ನಮತ ಶಮನವಾಗುತ್ತಾ ಎನ್ನುವ ಪ್ರಶ್ನೆ ಇದೀಗ ಕಾರ್ಯಕರ್ತರೊಳಗೆ ದಟ್ಟವಾಗಿ ಕೇಳಿ ಬಂದಿದೆ. ಇದಕ್ಕೆ ಕಾರಣ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಮತಾ ಗಟ್ಟಿ ಅವರನ್ನು ಕೆಪಿಸಿಸಿ ನೇಮಕ ಮಾಡಿರುವುದು.
ಸುಳ್ಯ ಕಾಂಗ್ರೆಸ್ ಈಗಾಗಲೇ ಒಡೆದ ಮನೆಯಂತಿರುವುದು ಸುಳ್ಳಲ್ಲ. ವಿಧಾನಸಭಾ ಚುನಾವಣೆಗೂ ಮುನ್ನವೇ ಆರಂಭಗೊಂಡ ಪಕ್ಷದೊಳಗಿನ ನಾಯಕರ ಆಂತರಿಕ ಕಚ್ಚಾಟ, ಶೀತಲ ಸಮರ, ಚುನಾವಣೆ ಮುಗಿದ ಬಳಿಕವೂ ಮುಂದುವರಿದಿದೆ. ಮುಖ್ಯವಾಗಿ ನಂದಕುಮಾರ್ ಮತ್ತು ಜಿ.ಕೃಷ್ಣಪ್ಪ ಬಣಗಳ ಮಧ್ಯೆ ಪ್ರಾರಂಭಗೊಂಡ ಆಂತರಿಕ ಭಿನ್ನಮತ ಇಡೀ ಸುಳ್ಯ ಕಾಂಗ್ರೆಸ್‌ನಲ್ಲೇ ಕಚ್ಚಾಟಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ ಈ ಇಬ್ಬರು ನಾಯಕರ ಸ್ವಪ್ರತಿಷ್ಠೆಗೋಸ್ಕರ ಪಕ್ಷ ಹಾಳಾಗುತ್ತಿದೆ ಎನ್ನುವ ಮಾತುಗಳು ಸುಳ್ಯ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಬೇಕೇ ಹೊರತು, ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಬಾರದು. ಸುಳ್ಯದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾದದ್ದೇ ಪಕ್ಷದ ಹೀನಾಯ ಸ್ಥಿತಿಗೆ ಕಾರಣ ಎನ್ನುವ ಮಾತುಗಳು ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ.

ಸುಳ್ಯದ ಕೆಲವು ಕಾಂಗ್ರೆಸ್ ನಾಯಕರಿಗೆ ಪಕ್ಷ ಸಂಘಟಿಸುವುದಕ್ಕಿಂತಲೂ ಹೆಚ್ಚಾಗಿ ಪಕ್ಷದ ರಾಜ್ಯ ಮಟ್ಟದ ನಾಯಕರ ಹಿಂದೆ ಸುತ್ತಾಡಿ ತಮಗೊಂದು ಹುದ್ದೆ ಗಿಟ್ಟಿಸಿಕೊಳ್ಳುವುದೇ ಮುಖ್ಯ ಎಂಬಂತಾಗಿದೆ ಎನ್ನುವ ಆರೋಪ ಕೂಡಾ ಕೇಳಿ ಬರುತ್ತಿದ್ದು ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕೆನ್ನುವ ಪ್ರಾಮಾಣಿಕ ಪ್ರಯತ್ನಕ್ಕೆ ಯಾರೂ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಸುಳ್ಯ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಮತ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮುಂದುವರಿದರೆ ಪಕ್ಷಕ್ಕೆ ಇನ್ನಷ್ಟು ಹಿನ್ನಡೆ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸುಳ್ಯದ ಕಾಂಗ್ರೆಸಿಗರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಬಡವರಿಗೆ, ಮಹಿಳೆಯರಿಗೆ ಅದ್ಭುತ ಕೊಡುಗೆ ನೀಡಿದ್ದು ಅದನ್ನೂ ಮನೆ ಮನೆಗೆ ಮುಟ್ಟಿಸಲು, ಪ್ರಚಾರ ಮಾಡಲು ಸುಳ್ಯದ ಕಾಂಗ್ರೆಸ್ ವಿಫಲವಾಗಿದೆ ಎನ್ನುವ ಆರೋಪ ಇನ್ನೊಂದೆಡೆ ಕೇಳಿ ಬರುತ್ತಿದೆ.
ಇದೀಗ ಸುಳ್ಯ ಕಾಂಗ್ರೆಸ್‌ನ ಇಬ್ಬರು ನಾಯಕರ ನಡುವಿನ ಕಚ್ಚಾಟದಿಂದ ಕಾರ್ಯಕರ್ತರು ಬೇಸತ್ತು ಹೋಗಿದ್ದು ಮುಂಬರುವ ತಾ.ಪಂ, ಜಿ.ಪಂ ಚುಣಾವಣೆ ಹಾಗೂ ಲೋಕಸಭಾ ಚುನಾವಣೆ ಹೊತ್ತಲ್ಲಾದರೂ ಪಕ್ಷವನ್ನು ಸಮರ್ಥವಾಗಿ ಸಂಘಟಿಸಬಲ್ಲ ಮೂರನೇ ವ್ಯಕ್ತಿಗೆ ನಾಯಕತ್ವ ನೀಡಿ ಎನ್ನುವ ಆಗ್ರಹ ಕೇಳಿ ಬರುತ್ತಿದೆ. ನಂದಕುಮಾರ್ ಹಾಗೂ ಜಿ.ಕೃಷ್ಣಪ್ಪ ಇಬ್ಬರೂ ತಮ್ಮ ಸ್ವಪ್ರತಿಷ್ಠೆಗಳನ್ನು ಬದಿಗಿಟ್ಟು ಒಗ್ಗಟ್ಟಿನಲ್ಲಿ ಪಕ್ಷ ಸಂಘಟಿಸಲಿ, ಇಲ್ಲವೇ ಸೈಲೆಂಟಾಗಿದ್ದುಕೊಂಡು ಪಕ್ಷ ಸಂಘಟಿಸುವವರಿಗೆ ಬೆಂಬಲ ನೀಡಲಿ ಎಂದು ಹಲವು ಕಾರ್ಯಕರ್ತರು ಹೇಳಿಕೊಂಡಿದ್ದಾರೆ.ಇದೀಗ ನೂತನ ಉಸ್ತುವಾರಿಯಾಗಿ ನೇಮಕಗೊಂಡಿರುವ ಮಮತಾ ಗಟ್ಟಿ ಅವರ ಮುಂದೆ ಅನೇಕ ಸವಾಲುಗಳಿದ್ದು ಅವೆಲ್ಲವನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಅವರ ಮುಂದಿದೆ. ನಾಯಕರ ನಡುವಿನ ಗುದ್ದಾಟಕ್ಕೆ ಇತಿಶ್ರೀ ಹಾಡುವ ಮೂಲಕ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮಹತ್ತರ ಹೊಣೆಗಾರಿಕೆ ಕೂಡಾ ಅವರ ಮೇಲಿದೆ.
ಕಾರ್ಯಕರ್ತರು ಕೂಡಾ ಮಮತಾ ಗಟ್ಟಿಯವರಿಂದ ನಿರೀಕ್ಷೆ ಇಟ್ಟುಕೊಂಡಿದ್ದು ಸುಳ್ಯ ಕಾಂಗ್ರೆಸ್‌ನ್ನು ಸರಿಪಡಿಸುತ್ತಾರೆ ಎನ್ನುವ ವಿಶ್ವಾಸ ಕಾರ್ಯಕರ್ತರ ವಲಯದಲ್ಲಿ ಕೇಳಿ ಬಂದಿದೆ. ವ್ಯಕ್ತಿಗಿಂದ ಪಕ್ಷ ಮುಖ್ಯ ಎಂಬ ಸಿದ್ದಾಂತಕ್ಕೆ ಹೆಚ್ಚು ಆದ್ಯತೆ ಕೊಟ್ಟರೆ ಸುಳ್ಯ ಕಾಂಗ್ರೆಸ್ ಮತ್ತೊಮ್ಮೆ ಪುಟಿದೇಳಲಿದೆ ಎಂದು ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಯಾವುದಕ್ಕೂ ಕಾದು ನೋಡಬೇಕಷ್ಟೇ.