ಆರ್ಯಾಪು, ನಿಡ್ಪಳ್ಳಿ, ಗ್ರಾ.ಪಂ ಉಪಚುನಾವಣೆ ಫಲಿತಾಂಶ: ಬಿಜೆಪಿಯನ್ನು ಮತದಾರರು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ – ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಪಂ ಉಪ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತರ ತೆಕ್ಕೆಯಲ್ಲಿದ್ದ ಒಂದು ಕ್ಷೆತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದ್ದು ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ, ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಫಲಿತಾಂಶದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ವಿಜೇತ ಅಭ್ಯರ್ಥಿ ನಿಡ್ಪಳ್ಳಿ ಗ್ರಾಪಂ ನ ಸತೀಶ್ ಶೆಟ್ಟಿಯವರನ್ನು ಅಭಿನಂದಿಸಿ ಮಾತನಾಡಿದ ಶಾಸಕರು ಚುನವಣೆ ನಡೆದ ಎರಡೂ ವಾರ್ಡುಗಳು ಬಿಜೆಪಿ ಬಲಿಷ್ಠ ವಾರ್ಡುಗಳಾಗಿದ್ದವು, ಎರಡೂ ವಾರ್ಡಿನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತರೇ ಗೆದ್ದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಫಲವನ್ನು ನೀಡಿದೆ. ನಿಡ್ಪಳ್ಳಿ ವಾರ್ಡು ಕಾಂಗ್ರೆಸ್ ಪಾಲಾಗಿದ್ದು ಮತ್ತು ಆರ್ಯಾಪು ವಾರ್ಡಿನಲ್ಲಿ ಮತಗಳಿಕೆಯಲ್ಲಿ ಏರಿಕೆಯಾಗಿರುವುದು ಸಾಕ್ಷಿಯಾಗಿದೆ. ಕೆಲವು ವ್ಯಯುಕ್ತಿಕ ಕಾರಣಗಳಿಂದ ಆರ್ಯಾಪು ವಾರ್ಡಿನಲ್ಲಿ ಸೋಲಾಗಿದೆ. ಮತದಾರ ಕಾಂಗ್ರೆಸ್ ಪರವಾಗಿದ್ದಾರೆ ಎಂಬುದು ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮತವಾಗಿ ಪರಿವರ್ತನೆ ಮಾಡಬೇಕಾದ ಅನಿವಾರ್ಯತೆ ಎಂಬುದು ಚುನಾವಣೆಯಲ್ಲಿ ಸಾಭೀತಾಗಿದೆ. ಮುಂದೆ ನಡೆಯುವ ತಾಪಂ ಹಗೂ ಜಿಪಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ನಮಗೆ ಇನ್ನಷ್ಟು ಫಲವನ್ನು ಕೊಡಲಿದೆ. ಬಿಜೆಪಿಯನ್ನು ಮತದಾರ ದೂರ ಮಾಡಿದ್ದಾನೆ ಎಂಬುದು ಚುನಾವಣೆಯಲ್ಲಿ ಗೋಚರಿಸಿದೆ ಎಂದು ಹೇಳಿದರು.
ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಕಾಂಗ್ರೆಸ್ ಯೋಜನೆಯ ಪ್ರಚಾರವನ್ನು ಇನ್ನಷ್ಟು ಗಟ್ಟಿಯಾಗಿ ಮಾಡಬೇಕಿದೆ ಎಂದು ಹೇಳಿದರು.