ಕರಾವಳಿ

ಅಕ್ಕಿ ಸಾಲ ಕೊಡುತ್ತಿದ್ದ ಅಂಗಡಿ ಮಾಲಕನ ನೆನೆದು ಕಣ್ಣೀರು ಹಾಕಿದ ಶಾಸಕರು…!


ಪುತ್ತೂರು: ನಾವು ಚಿಕ್ಕವರಿರುವಾಗ ನಮ್ಮ ಮನೆಯಲ್ಲಿ ಬಡತನವಿತ್ತು. ಕೆಲವೊಮ್ಮೆ ಒಪ್ಪೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಕೋಡಿಂಬಾಡಿಯಲ್ಲಿರುವ ಅನಂತ್ ನಾಯಕ್ ಮೈರಾ ಎಂಬವರ ಜಿನಸು ಅಂಗಡಿಯಿಂದ ನಾವು ಮನೆಗೆ ಸಾಮಾನು ತರುತ್ತಿದ್ದೆವು. ಕೆಲವೊಮ್ಮೆ ಹಣ ಕೊಡುವಾಗ ತಡವಾದರೂ ಸಾಮಾನು ಕೊಡುತ್ತಿದ್ದರು, ನಾವು ದುಡ್ಡು ಕೊಡುವಾಗ ತಡವಾದರೂ ಒಂದುದಿನವೂ ನಮ್ಮನ್ನು ಜೋರು ಮಾಡಿಲ್ಲ, ದುಡ್ಡು ಕೊಡದೆ ಸಾಮಾನು ಕೊಡುವುದಿಲ್ಲ ಎಂದು ಅನಂತ್ ನಾಯಕ್‌ರವರು ಒಮ್ಮೆಯೂ ಹೇಳಿಲ್ಲ. ಅಂಥಹ ವ್ಯಕ್ತಿ ಮೃತಪಟ್ಟಾಗ ನಾನು ಅವರ ಮೃತದೇಹವನ್ನು ನೋಡಲು ಸಾಧ್ಯವಾಗಲಿಲ್ಲ, ಅವರ ಉತ್ತರಕ್ರಿಯೆಗೂ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಶಾಸಕರಾದ ಅಶೋಕ್ ರೈಯವರು ಮೃತ ಅನಂತ್ ನಾಯಕ್‌ರವರ ಶ್ರದ್ದಾಂಜಲಿ ಸಭೆಯಲ್ಲಿ ಕಣ್ಣೀರು ಹಾಕಿದ ಘಟನೆ ನಡೆಯಿತು.


ನಮ್ಮ ತಂದೆಯವರು ಶಿಕ್ಷಕರಾಗಿದ್ದರೂ ಆ ಕಾಲದಲ್ಲಿ ಕನಿಷ್ಠ ಸಂಬಳ ಸಿಗುತ್ತಿತ್ತು. ನಮ್ಮಲ್ಲಿ ಏನೂ ಇರಲಿಲ್ಲ. ಕಡುಬಡತನದ ಕುಟುಂಬ ನಮ್ಮದಾಗಿತ್ತು. ಶಾಲೆಬಿಟ್ಟು ಮನೆಗೆ ಬರುವಾಗ ಮನೆಯಲ್ಲಿ ತಿನ್ನಲೂ ಏನೂ ಇರಲಿಲ್ಲ. ಸಂಜೆ ಅಂಗಡಿಗೆ ಹೋಗಿ ಅಲ್ಲಿಂದ ಅಕ್ಕಿ ಸಾಮಾನು ತಂದ ಬಳಿಕ ನಮ್ಮ ಮನೆಯಲ್ಲಿ ಊಟ ರೆಡಿಯಾಗುತ್ತಿತ್ತು. ಅಂದಿನ ಆ ಕಷ್ಟದ ದಿನಗಳಲ್ಲಿ ನಮಗೆ ಸಾಲವಾಗಿ ಸಾಮಾನು ಕೊಡುತ್ತಿದ್ದ ಅನಂತ ನಾಯಕ್‌ರವರ ಉಧಾರತೆಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ನೀವು ಶಾಸಕನಾಗುತ್ತಿಯ ಅಶೋಕ.. ಎಂದು ಆಶೀರ್ವಾದ ಮಾಡಿದ್ದರು. ಆದರೆ ಶಾಸಕನಾದ ಬಳಿಕ ನನಗೆ ಅವರನ್ನು ನೋಡಲು ಅವಕಾಶ ಸಿಕ್ಕಿಲ್ಲ ಮತ್ತು ನನಗೆ ಸಾಧ್ಯವಾಗದೇ ಇರುವುದು ಅತ್ಯಂತ ನೋವಿನ ವಿಚಾರವಾಗಿದೆ. ಅವರು ಈಗ ನಮ್ಮನ್ನು ಅಗಲಿರಬಹುದು ಆದರೆ ಅವರು ಮಾಡಿದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ. ಶಾಸಕರು ಮಾತನಾಡುತ್ತಿದ್ದ ವೇಳೆ ಅಳುತ್ತಲೇ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಸಭೆಯಲ್ಲಿದ್ದವರ ಕಣ್ಣುಗಳೂ ತೇವಗೊಂಡವು.

Leave a Reply

Your email address will not be published. Required fields are marked *

error: Content is protected !!