ಚಿರತೆ ಹಿಡಿದು ಬೈಕಿನಲ್ಲಿ ಸಾಗಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸಾಹಸಿ ಯುವಕ..!
ಯುವಕನೋರ್ವ ಹೊಲದಲ್ಲಿದ್ದ ಚಿರತೆಯನ್ನು ತಾನೇ ಸೆರೆ ಹಿಡಿದು, ತನ್ನದೇ ಬೈಕಿನಲ್ಲಿ ಕಟ್ಟಿ ಸಾಗಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿರುವ ಅಪರೂಪದ ಮತ್ತು ವಿಚಿತ್ರ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮದಲ್ಲಿ ವರದಿಯಾಗಿದೆ.

ಬಾಗೀವಾಳು ಗ್ರಾಮದ ವೇಣುಗೋಪಾಲ್ ಮುತ್ತು ಎಂಬವರು ಜಮೀನಿಗೆ ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿತ್ತು. ಅವರು ಹೆದರದೆ ಹರಸಾಹಸಪಟ್ಟು ಚಿರತೆಯನ್ನು ಹಿಡಿದು ಅದರ ಕಾಲುಗಳನ್ನು ಕಟ್ಟಿಹಾಕಿದ್ದರು. ಮರಿ ಚಿರತೆಯಾಗಿದ್ದು, ಅಸ್ವಸ್ಥವಾಗಿದ್ದ ಅದನ್ನು ವೇಣುಗೋಪಾಲ್ ತಮ್ಮ ಬೈಕಿನ ಹಿಂಬದಿಗೆ ಕಟ್ಟಿಕೊಂಡು, ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.