ಸುಳ್ಯ ಕಾಂಗ್ರೆಸ್’ನೊಳಗೆ ತಾರಕಕ್ಕೇರಿದ ಆಂತರಿಕ ಕಚ್ಚಾಟ: ಇಬ್ಬರು ನಾಯಕರ ವಿರುದ್ಧ ಪೊಲೀಸ್ ದೂರು ನೀಡಿದ ಜಿ ಕೃಷ್ಣಪ್ಪ
ಸುಳ್ಯ ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ, ಭಿನ್ನಮತ ತಾರಕಕ್ಕೇರಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಮುಂದುವರಿದ ಭಾಗವಾಗಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಹಾಗೂ ಸುಳ್ಯಕ್ಕೆ ಬರದಂತೆ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರಾದ ಸಚಿನ್ ರಾಜ್ ಶೆಟ್ಟಿ ಹಾಗೂ ಭವಾನಿ ಶಂಕರ್ ಕಲ್ಮಡ್ಕ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
‘ದುರಹಂಕಾರಿ ಕೃಷ್ಣಪ್ಪ, ಕೃಷ್ಣಪ್ಪ ಹಠಾವೋ, ಕಾಂಗ್ರೆಸ್ ಬಚಾವೋ’ ಎಂದು ವೈಯಕ್ತಿಕ ನಿಂದನೆಯ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ ಮತ್ತು ಸುಳ್ಯಕ್ಕೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಜಿ ಕೃಷ್ಣಪ್ಪ ದೂರು ನೀಡಿದ್ದಾರೆ.
ಕೃಷ್ಣಪ್ಪರವರು ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ, ನಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶಕ್ಕೆ ಈ ರೀತಿ ಪೊಲೀಸ್ ದೂರು ನೀಡಿದ್ದಾರೆ ಎಂದು ಉಚ್ಚಾಟಿತ ಕಾಂಗ್ರೆಸ್ ನಾಯಕ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ಕೃಷ್ಣಪ್ಪರವರು ನೀಡಿರುವ ದೂರು ಸುಳ್ಳಿನಿಂದ ಕೂಡಿದ್ದು ಅವರು ಪಕ್ಷವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಇನ್ನೋರ್ವ ಉಚ್ಛಾಟಿತ ಕಾಂಗ್ರೆಸ್ ಮುಖಂಡ ಭವಾನಿ ಶಂಕರ್ ಕಲ್ಮಡ್ಕ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸುಳ್ಯ ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ, ಭಿನ್ನಮತ, ಗೊಂದಲ ಮುಂದುವರಿದಿದೆ. ನಾಯಕರ ನಡುವಿನ ಕಚ್ಚಾಟಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಳ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದರೂ ಹೈಕಮಾಂಡ್ ಮೌನಕ್ಕೆ ಶರಣಾಗಿದ್ದೇಕೆ ಎನ್ನುವ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರದ್ದು. ಸತತ ಸೋಲುಗಳಿಂದ ಪಾಠ ಕಲಿಯದ ಕಾಂಗ್ರೆಸ್ ನಾಯಕರು ಯಾವಾಗ ಪಾಠ ಕಲಿಯುತ್ತಾರೋ? ಯಾವಾಗ ಒಗ್ಗಟ್ಟು ಪ್ರದರ್ಶಿಸುತ್ತಾರೋ? ಯಾವಾಗ ಪಕ್ಷವನ್ನು ಪಕ್ಷವನ್ನು ಬಲಪಡಸುತ್ತಾರೋ? ಎಂದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ.