ಬಸ್ಸು ಫ್ರೀ ಇದೆ.. ಬಾ ಎಂದು ಕರೆದ ಪ್ರಿಯತಮ.. 11 ತಿಂಗಳ ಮಗುವನ್ನೇ ಬಿಟ್ಟು ಬಸ್ಸು ಹತ್ತಿದಳು..!
ಕೋಡಿಂಬಾಡಿಯಲ್ಲಿ ತಡ ರಾತ್ರಿ ಕುಟುಂಬಸ್ಥರ ಹುಡುಕಾಟ
ಪುತ್ತೂರು: ಮಹಿಳೆಯೋರ್ವರು ತನ್ನ 11 ತಿಂಗಳ ಮಗುವನ್ನು ಬಿಟ್ಟು ಪುತ್ತೂರಿನಲ್ಲಿದ್ದ ತನ್ನ ಪ್ರಿಯತಮನನ್ನು ಹುಡುಕಿಕೊಂಡು ಬಂದಿದ್ದು ಆಕೆಯನ್ನು ಹುಡುಕಿಕೊಂಡು ಮನೆಯವರು ತಡ ರಾತ್ರಿ ಪುತ್ತೂರಿನ ಕೋಡಿಂಬಾಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆ ವೇಳೆ ಅಲ್ಲಿಂದ ಅವರಿಬ್ಬರು ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ ಘಟನೆ ಜೂ. 13 ರಂದು ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮಹಿಳೆ ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ಕೋಡಿಂಬಾಡಿ ಪರಿಸರದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಮಾಹಿತಿ ಮನೆಯವರಿಗೆ ಮೊದಲೇ ಇತ್ತು ಎನ್ನಲಾಗಿದೆ. ತವರು ಮನೆಯಲ್ಲಿದ್ದ ಮಹಿಳೆ ತನ್ನ ಮಗುವನ್ನು ತೊರೆದು ದಿಢೀರ್ ನಾಪತ್ತೆಯಾಗಿದ್ದಳು. ಆಕೆ ತಪ್ಪಿಸಿಕೊಂಡು ಆತನ ಬಳಿಗೆ ಬಂದಿರಬಹುದು ಎಂದು ಭಾವಿಸಿ ಆಕೆಯ ತವರು ಮನೆಯವರು ಪುತ್ತೂರಿಗೆ ಬಂದಿದ್ದು ರಾತ್ರಿ ಸುಮಾರು 11 ಗಂಟೆಯ ವೇಳೆ ಕೋಡಿಂಬಾಡಿಗೆ ಬಂದಿದ್ದಾರೆ.
ಈ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ರವರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಂದ ಪೊಲಿಸರು ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಪೊಲೀಸರು ಟವರ್ ಲೊಕೇಶನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದಾಗಿ ಮಾಹಿತಿ ಲಬ್ಯವಾಗಿದ್ದು ಸಿದ್ದಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದವರಿಗೆ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರರಿಗೆ ಕುಟುಂಬಸ್ಥರು ಅಭಿನಂದಿಸಿದ್ದಾರೆ.