ಕರಾವಳಿರಾಜಕೀಯ

ಸುಳ್ಯ ಕಾಂಗ್ರೆಸ್’ನಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ ಉಚ್ಛಾಟಿತ ನಾಯಕರ ಸಭೆ:

ಸುಳ್ಯ ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ವಿಧಾನಸಭಾ ಚುನಾವಣೆ ಸಂದರ್ಭ ಟಿಕೆಟ್ ವಿಚಾರದಲ್ಲಿ ಉಂಟಾದ ಆಂತರಿಕ ಕಚ್ಚಾಟ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕವೂ ಮುಂದುವರಿದಿತ್ತು. ಮುಂದುವರಿದ ಭಾಗವಾಗಿ ಸುಳ್ಯ ಮತ್ತು ಕಡಬ ಬ್ಲಾಕ್‌ನ ಹಲವು ನಾಯಕರನ್ನು ಉಚ್ಛಾಟನೆ ಮಾಡಿದ ವಿಚಾರ ತೀವ್ರ ಚರ್ಚೆ ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿತ್ತು.

ಸುಳ್ಯ ಕಾಂಗ್ರೆಸ್‌ನೊಳಗೆ ಒಗ್ಗಟ್ಟು ಮೂಡಿಸಬೇಕಾದ ಮೇಲಿನ ನಾಯಕರು ಕಂಡೂ ಕಾಣದವರಂತೆ ನಟಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆಯೂ ಎದ್ದು ಕಾಣುತ್ತಿದೆ. ಇದೀಗ ಮತ್ತೂ ಮುಂದುವರಿದು ಉಚ್ಚಾಟಿತ ಮತ್ತು ಅಮಾನತಾದ ನಾಯಕರು ಒಂದೆಡೆ ಸಭೆ ನಡೆಸಿದ್ದಾರೆ. ಮಹೇಶ್ ಕರಿಕ್ಕಳ ಅವರ ಮನೆಯಲ್ಲಿ ಜೂ.13ರಂದು ಶೋಕಾಸ್ ನೋಟೀಸು ಪಡೆದಿರುವ ನಾಯಕರ ಸಹಿತ ಹಲವರು ಸಭೆಯಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.

ಸಭೆಯಲ್ಲಿ ಸೇರಿದ ನಾಯಕರು ಮತ್ತು ಇತರರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸುಳ್ಯ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿರುವ ಅವರು ಸುಳ್ಯದಲ್ಲಿ ಕಾಂಗ್ರೆಸ್ ಒಡೆಯಲು ಮತ್ತು ಗೊಂದಲ ಉಂಟಾಗಲು ಕೃಷ್ಣಪ್ಪ ಅವರೇ ಕಾರಣ ಎಂದು ಆರೋಪಿಸಿ ಅವರನ್ನು ಸುಳ್ಯಕ್ಕೆ ಬಾರದಂತೆ ತಡೆಯಬೇಕು ಎಂದೂ ಆಗ್ರಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸುಳ್ಯ ಕಾಂಗ್ರೆಸಿನ ನಿಜ ವಿಚಾರಗಳನ್ನು ಮನದಟ್ಟು ಮಾಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.



ಶೋಕಾಸ್ ನೋಟೀಸು ಸಿಕ್ಕಿದವರು ಚಿಂತೆ ಮಾಡಬೇಡಿ, ಹೈಕಮಾಂಡ್ ಜೊತೆ ಮಾತನಾಡಿ ನೈಜ ವಿಚಾರ ತಿಳಿಸುವ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಶೋಕಾಸ್ ನೋಟೀಸು ಪಡೆದವರಿಗೆ ಹೆಚ್.ಎಂ ನಂದಕುಮಾರ್ ಅಭಯ ನೀಡಿದರು.
ಒಟ್ಟಾರೆಯಾಗಿ ಸುಳ್ಯದ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಸತತವಾಗಿ ಸೋಲುತ್ತಾ ಬಂದಿದ್ದರೂ ಪಾಠ ಕಲಿಯದ ಇಲ್ಲಿನ ಕಾಂಗ್ರೆಸ್ಸಿಗರು ಮತ್ತು ಮೇಲಿನ ಸ್ತರದ ನಾಯಕರು ಪಕ್ಷವನ್ನು ಇನ್ನಷ್ಟು ಡ್ಯಾಮೇಜ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆಯೂ ಸುಳ್ಯ ಕಾಂಗ್ರೆಸ್‌ನಲ್ಲಿ ಇಲ್ಲ ಎನ್ನುವ ಆರೋಪವೂ ಇನ್ನೊಂದೆಡೆ ಕೇಳಿ ಬಂದಿದೆ. ಸುಳ್ಯದಲ್ಲಿ ಹಲವು ನಾಯಕರಿದ್ದರೂ ಅವರೊಳಗೆ ಒಗ್ಗಟ್ಟು ಇಲ್ಲದ ಪರಿಣಾಮ ಭಿನ್ನಮತ ಸೃಷ್ಟಿಯಾಗುತ್ತಿದೆ ಎನ್ನಲಾಗುತ್ತಿದ್ದು ರಾಜ್ಯ ಮಟ್ಟದ ನಾಯಕರ ಹಿಂದೆ ಸುತ್ತುವ ನಾಯಕರು ಸುಳ್ಯದಲ್ಲಿ ಹೆಚ್ಚಾಗಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುಳ್ಯದ ವಿಚಾರವಾಗಿ ಹೈಕಮಾಂಡ್‌ಗೆ ಸರಿಯಾದ ಮಾಹಿತಿ ರವಾನೆಯಾಗುತ್ತಿಲ್ಲ ಎನ್ನುವ ಆರೋಪವೂ ಬಲವಾಗಿ ಕೇಳಿ ಬಂದಿದೆ.

ಸಭೆಯಲ್ಲಿ ಬಾಲಕೃಷ್ಣ ಬಳ್ಳೇರಿ, ಮಹೇಶ್ ಕುಮಾರ್ ಕರಿಕ್ಕಳ, ಎಚ್.ಎಂ ನಂದಕುಮಾರ್, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸಚಿನ್ ರಾಜ್ ಶೆಟ್ಟಿ, ಗೋಕುಲ್ ದಾಸ್, ಆಶಾ ಲಕ್ಷ್ಮಣ್, ಬಶೀರ್ ಅಹ್ಮದ್, ಗೋಪಾಲಕೃಷ್ಣ ಭಟ್, ಶಶಿಧರ್, ಫೈಝಲ್, ಭವಾನಿ ಶಂಕರ್, ಚೇತನ್, ಜಗನ್ನಾಥ, ಕಮಲಾಕ್ಷ, ಶೋಭಿತ್, ಕ್ಸೇವಿಯರ್ ಬೇಬಿ, ಸಂದೇಶ್ ಮತ್ತಿತರ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!