ಗಾಳಿ ಮಳೆಗೆ ಎಷ್ಟೇ ಕಂಬಗಳು ಉರುಳಿದರೂ 24 ಗಂಟೆಯೊಳಗೆ ಕರೆಂಟ್ ಬರಬೇಕು-ಮೆಸ್ಕಾಂ ಗೆ ಶಾಸಕ ಅಶೋಕ್ ರೈ ಸೂಚನೆ
ಪುತ್ತೂರು: ಮಳೆಗಾಲ ಪ್ರಾರಂಭದಲ್ಲಿ ಗಾಳಿ, ಮಳೆ, ಸಿಡಿಲು ಜೋರಾಗಿರುತ್ತದೆ. ಗಾಳಿ ಮಳೆಗೆ ಕರೆಂಟ್ ಕಂಬಗಳು ನೆಲಕ್ಕುರುಳುತ್ತವೆ. ಇದರಿಂದ ವಿದ್ಯುತ್ ಕಡಿತಗೊಂಡು ಸಮಸ್ಯೆ ಉಂಟಾಗುತ್ತದೆ. ಎಷ್ಟೇ ಕಂಬಗಳು ಉರುಳಿದರೂ 24 ಗಂಟೆಯ ಒಳಗೆ ಅದು ದುರಸ್ತಿಯಾಗಬೇಕು ಮತ್ತು ಕರೆಂಟ್ ಕೂಡಾ ಬರಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯುತ್ ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಅದನ್ನು ತೆರವು ಮಾಡಬೇಕು ಅಥವಾ ಬದಲಿ ವ್ಯವಸ್ಥೆ ಮಾಡಬೇಕು. ಶಾಲಾ ಕಾಲೇಜು ಪರಿಸರ ವಿದ್ಯುತ್ ಕಂಬ, ವಿದ್ಯುತ್ ತಂತಿ ಬಗ್ಗೆ ವಿಶೇಷ ಗಮನಹರಿಸಬೇಕು. ಎಲ್ಲಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು, ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲು ನಾನು ಸಿದ್ದ ಎಂದು ಶಾಸಕರು ಹೇಳಿದರು