IPL: ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ದಾಖಲೆಯ 10ನೇ ಬಾರಿ ಫೈನಲ್’ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
IPL ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ IPL ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ CSK ತಂಡ ಆರಂಭಿಕರಾದ ಡೆವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು.
ಮೊದಲ ವಿಕೆಟ್ ಗೆ ಈ ಜೋಡಿ 87 ರನ್ ಪೇರಿಸಿದರು. ರುತುರಾಜ್ ಗಾಯಕ್ವಾಡ್ 60 ರನ್ ಗಳಿಸಿ ಗಮನ ಸೆಳೆದರು. ಕಾನ್ವೆ 40 ರನ್ ಗಳಿಸಿ ಔಟಾದರು. ಅಂತಿಮವಾಗಿ CSK ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಿತು.
173 ರನ್ ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡ ಪವರ್ಪ್ಲೇನಲ್ಲೇ ವೃದ್ದಿಮಾನ್ ಸಾಹ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದಾಗ್ಯೂ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ 40 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಗಿಲ್ ನಿರ್ಗಮನದ ಬೆನ್ನಲ್ಲೇ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಕೂಡ ವಿಕೆಟ್ ಒಪ್ಪಿಸಿದರು.
ರಶೀದ್ ಖಾನ್ 30 ರನ್ ಬಾರಿಸಿ ಔಟಾದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ CSK 15 ರನ್ ಗಳ ಜಯ ಸಾಧಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು IPL ಫೈನಲ್ ಪ್ರವೇಶಿಸುತ್ತಿರುವುದು ಇದು 10ನೇ ಬಾರಿ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಐಪಿಎಲ್ ಫೈನಲ್ ಆಡಿದ ದಾಖಲೆ ಸಿಎಸ್ಕೆ ತಂಡದ ಹೆಸರಿನಲ್ಲಿದೆ. 2ನೇ ಸ್ಥಾನದಲ್ಲಿ 6 ಫೈನಲ್ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ಇದೆ.
ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಆಡಬೇಕಿದೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ CSK ವಿರುದ್ಧ ಫೈನಲ್ ಆಡಲಿದೆ.